ಬದಿಯಡ್ಕ: ಮೀಸಲಾತಿ ಸಂರಕ್ಷಿಸಲು ಕೇಂದ್ರ ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕೆಂದು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಕಾಸರಗೋಡು ಜಿಲ್ಲಾ ಅಧ್ಯಕ್ಷ ವಸಂತ ಅಜಕ್ಕೋಡು ವಿನಂತಿಸಿದ್ದಾರೆ. ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಇತ್ತೀಚೆಗೆ ಹೊರಡಿಸಿದ ಆದೇಶ ಪರಿಶಿಷ್ಟ ಜಾತಿ, ವರ್ಗದವರ ಮೀಸಲಾತಿ ಸೌಲಭ್ಯವನ್ನು ಕಸಿದುಕೊಳ್ಳುವ ಹಾಗಿದೆ. ಇದರಿಂದ ದೇಶದ ಬಡಜನರಾದ ಪರಿಶಿಷ್ಟ ಜಾತಿ, ವರ್ಗದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಮೂಲಕ ಈ ವಿಭಾಗದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದರು.
ನೀರ್ಚಾಲು ಪ್ರಾದೇಶಿಕ ಕಚೇರಿಯಲ್ಲಿ ಜರಗಿದ ಮಧೂರು ಮಹಾಮಾತೆ ಮೊಗೇರ ಸಮಾಜದ ಕಾರ್ಯಕಾರಿ ಸಮಿತಿ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜ ಸಮಿತಿಯ ಗೌರವ ಸಲಹೆಗಾರ ರಾಮಪ್ಪ ಮಂಜೇಶ್ವರ, ಕೃಷ್ಣ ದರ್ಭೆತ್ತಡ್ಕ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿಟ್ಟೋಣಿ ಬಂದ್ಯೋಡು, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ಕೋಶಾಧಿಕಾರಿ ಡಿ.ಕೃಷ್ಣದಾಸ್, ಸಂಚಾಲಕ ರಾಮ ಪಟ್ಟಾಜೆ, ಗೋಪಾಲ ಡಿ, ಸುಂದರ ಮಾಳಂಗಾಯಿ, ಸುಂದರ ಬಾರಡ್ಕ, ಜಯಾರಾಮಪ್ಪ, ಹರಿಶ್ಚಂದ್ರ ಪುತ್ತಿಗೆ, ಕಿಶೋರ್ ಬೇಕಲ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾರ್ಚ್ 1ರಂದು ದರ್ಭೆತ್ತಡ್ಕ ಧ್ಯಾನ ಮಂದಿರದಲ್ಲಿ ಮದರು ಮಹಾಮಾತೆ ಮೊಗೇರ ಸಮಾಜದ ಮಹಿಳಾ ಸಮಿತಿ ರೂಪಿಸಲು ನಿರ್ಧರಿಸಲಾಯಿತು. ಇದೇ ಸಂದರ್ಭದಲ್ಲಿ ಮೊಗೇರ ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಯಲಿದೆ. ಸಮಾಜ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಕರ ದರ್ಭೆತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.