ಮಂಜೇಶ್ವರ: ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯತಿಗಳು ಭೌತಿಕ-ತಾಂತ್ರಿಕವಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ಏರುವುದು ರಾಜ್ಯ ಸರ್ಕಾರದ ಲಕ್ಷ್ಯವಾಗಿದೆ. ಈ ಮಧ್ಯೆ ಗಡಿ ಗ್ರಾಮವಾಗಿರುವ ವರ್ಕಾಡಿಗೆ ತಮ್ಮ ಕಾರ್ಯಕ್ಷಮತೆ, ಯೋಜನಾನುಷ್ಠಾನಗಳಿಗಾಗಿ ಐ.ಎಸ್.ಒ ಮಾನ್ಯತೆ ಲಭ್ಯವಾಗಿರುವುದು ಅಂತರಾಷ್ಟ್ರೀಯ ಗರಿಷ್ಠ ಮಿತಿಗೆ ಲಭ್ಯವಾದ ಮಾನ್ಯತೆ ಎನ್ನುವುದು ಹೆಮ್ಮೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ವರ್ಕಾಡಿ ಧರ್ಮನಗರದ ಮಿನಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ವರ್ಕಾಡಿ ಉತ್ಸವ-2020 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ. ಗಳ ಪಂಚಾಯಿತಿನ ಹಲವು ಬೇಡಿಕೆಗಳನ್ನು ಮುಂದಿಟ್ಟು ತಯಾರಿಸಿದ ಮಾಸ್ಟರ್‍ಪ್ಲಾನ್ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು, ಮಾತ್ರವಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳನ್ನು ಸಾಕಾರಗೊಳಸಲು ಸಹಕರಿಸಲಾಗುವುದು ಎಂದರು. ವರ್ಕಾಡಿ ಉತ್ಸವದಂತಹ ಇಂತಹ ಗ್ರಾಮೀಣ ಉತ್ಸವಗಳು ಅಬಿವೃದ್ಧಿಯ ಸಂಕೇತವಾಗಿವೆ. ಕೃಷಿ, ಹೈನುಗಾರಿಕೆ ಸಹಿತ ವಿವಿಧ ವಲಯಗಳಲ್ಲಿ ಗ್ರಾ.ಪಂ ಉತ್ತಮ ಸಾಧನೆಗೈದಿದೆ. ಇನ್ನು ಮುಂದೆಯೂ ವಿವಿಧ ವಲಯಗಳಲ್ಲಿ ಪೂರಕ ಹಾಗೂ ಸುಸ್ಥಿರ ಅಭಿವೃದ್ಧಿ ಗ್ರಾ.ಪಂ ಆಡಳಿತ ಸಮಿತಿಗೆ ಸಾಧ್ಯವಾಗಲಿ ಎಂದರು. ತಾಲೂಕು ಆಸ್ಪತ್ರೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ತಿಳಿಸಿದಂತೆ ಅಭಿವೃದ್ಧಿ ಲಕ್ಷ್ಯವನ್ನು ಪೂರೈಸಲು ಸರಕಾರ ಹಾಗೂ ರಾಜ್ಯದ ಇಲಾಖೆಗಳು ಬದ್ಧವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಬಿವೃದ್ಧಿಯ ದೃಷ್ಠಿಯಲ್ಲಿಟ್ಟುಕೊಂಡು ಶಾಸಕರ ಒಳಗೊಳ್ಳುವಿಕೆಯ ಮೂಲಕ ಸಹಕಾರ ನೀಡಲಾಗುವುದು ಎಂದರು. ಉತ್ತರ ಮಲಬಾರಿನ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಕಳೆದ ಮೂರು ವರ್ಷಗಳಿಂದ ಸರಕಾರ ಎಲ್ಲ ರೀತಿಯಲ್ಲಿ ಕಾಸರಗೋಡು ಸಹಿತ ಉತ್ತರದ ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕಂಕಣಬದ್ಧವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಸಿ ಕಮರುದ್ದೀನ್ ಅವರು ಮಾತನಾಡಿ ಧರ್ಮನಗರದಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ವರ್ಕಾಡಿ ಉತ್ಸವ ಮಾದರಿ ಉತ್ಸವವಾಗಿದೆ. ಎಲ್ಲ ಜನವಿಭಾಗಗಳ ಐಕ್ಯತೆಯೊಂದಿಗೆ ನಡೆಯುವ ಇಂತಹ ಉತ್ಸವಗಳು ನಾಡಿನಲ್ಲಿ ಸಾಮರಸ್ಯ ಸೃಷ್ಠಿಗೆ ಕಾರಣವಾಗುತ್ತವೆ ಎಂದರು. ಬಜೆಟ್ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಬಜೆಟ್ ನಿರಾಶದಾಯಕವಾಗಿದೆ, ಕಾಸರಗೋಡು ಮತ್ತು ಮಂಜೇಶ್ವರಕ್ಕೆ ಉತ್ತಮ ಯೋಜನೆಗಳು ಅತ್ಯಗತ್ಯ. ಸಚಿವರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಸಚಿವರಲ್ಲಿ ವಿನಂತಿಸಿದರು. ಈ ಸಂದರ್ಭ ಬಹಳ ಹಿಂದೆ ಶಾಸಕ, ಸಚಿವರಾಗಿ ಮಂಜೇಶ್ವರದ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದ ಡಾ. ಎ.ಸುಬ್ಬರಾವ್ ಅವರ ಕರ್ತತ್ವ ಪ್ರಜ್ಞೆಯನ್ನು ಸ್ಮರಿಸಿದರು. ಮಂಜೇಶ್ವರ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿ ಜನಸಾಮಾನ್ಯರ ಆರೋಗ್ಯ ಸೇವೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತಾಗಬೇಕಿದೆ. ಇದರ ಅಭಿವೃದ್ಧಿಗೆ ಪೂರಕವಾಗಿ ಕಿಫ್ಬಿ ಮೂಲಕ ಹಣ ಅನುಮೋದಿಸಬೇಕಿದೆ ಎಂದರು. ಗ್ರಾಮೀಣ ಜನರ ಧಾರ್ಮಿಕ ಸಾಮರಸ್ಯ, ಐಕ್ಯತೆಯು ಎಲ್ಲರಿಗೂ ಮಾದರಿಯಾಗಿದೆ ಎಂದರು. ಇಂತಹ ಉತ್ಸವಗಳು ನಾಡಿನ ಸಾಂಸ್ಕøತಿಕ, ಸಾಮಾಜಿಕತೆಯ ಅಭಿವ್ಯಕ್ತಿ ಎಂದರು.
ಈ ಸಂದರ್ಭ ಗ್ರಾ.ಪಂಗೆ ಐ.ಎಸ್.ಒ ಸರ್ಟಿಫಿಕೆಟ್ ಅನ್ನು ಸಚಿವ ಇ.ಚಂದ್ರಶೇಖರನ್ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಅವಿರಗೆ ಹಸ್ತಾಂತರಿಸಿದರು. ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರು ಇದ್ದರು. ವರ್ಕಾಡಿ ಗ್ರಾ.ಪಂ ಹಲವು ಯೋಜನೆಗಳ ಮಾಸ್ಟರ್ ಪ್ಲಾನ್ ಅನ್ನು ಸಚಿವರಿಗೆ ನೀಡಲಾಯಿತು.
ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ ಉದ್ಘಾಟನೆ, ಪಂಚಾಯತ್ ಮಿನಿ ಸ್ಟೇಡಿಯಂ, ಕೃಷಿ ಭವನ ಕಟ್ಟಡ ಶಿಲಾನ್ಯಾಸ, ಐ.ಎಸ್.ಒ ಸರ್ಟಿಫಿಕೇಟ್ ಘೋಷಣೆ ಮೊದಲಾದವುಗಳನ್ನು ಶಿಲಾಫಲಕ ಅನಾವರಣಗೊಳಿಸುವ ಮೂಲಕ ಜೌಪಚಾರಿಕವಾಗಿ ಉದ್ಘಾಟಿಸಲಾಯಿತು. ಪಶು ವೈದ್ಯಕೀಯ ಆಸ್ಪತ್ರೆ ಕೀಲಿಕೈಯನ್ನು ಪಶು ವೈದ್ಯಾಧಿಕಾರಿ ಡಾ.ಅನುಮೋದ್ ಅವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವರ್ಷಾ ಎಂ.ಆರ್ ಬಳಗದಿಂದ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ ಬಶೀರ್, ಸ್ಥಾಯೀ ಸಮಿತಿ ಅದ್ಯಕ್ಷ ಹರ್ಷಾದ್ ವರ್ಕಾಡಿ ಮಾತನಾಡಿದರು. ಮೀಂಜಾ ಗ್ರಾ.ಪಂ ಅಧ್ಯಕ್ಷೆ ಶಂಶಾದ್ ಶುಕೂರ್, ವರ್ಕಾಡಿ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ವಿ.ದೇವಪ್ಪ ಶೆಟ್ಟಿ, ಕೆ.ಕಿಟ್ಟಣ್ಣ ಶೆಟ್ಟಿ, ಎಂ. ರಾಧಾ, ಪಿ.ಬಿ ಅಬೂಬಕರ್ ಪಾತೂರು, ಸುನೀತಾ ವಸಂತ್, ಉಮಾವತಿ, ಜಯಲಕ್ಷ್ಮೀ, ಎಸ್. ಭಟ್. ಗ್ರಾ.ಪಂ ಕಾರ್ಯದರ್ಶಿ ರಾಜೇಶ್ವರಿ ಮೊದಲಾದವರು ಇದ್ದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಲಾಯಿತು. ವರ್ಕಾಡಿ ಗ್ರಾ.ಪಂ ಹೆಡ್ ಕ್ಲರ್ಕ್ ಮನಿಲ್ ಕುಮಾರ್ ಧನ್ಯವಾದಗೈದರು.
ಉತ್ಸವದ ಭಾಗವಾಗಿ ಬೆಳಗ್ಗೆ ವರ್ಕಾಡಿ ಗ್ರಾ.ಪಂ ಕಚೇರಿ ಪರಿಸರದಲ್ಲಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ ಉಪಾಧ್ಯಕ್ಷೆ ಸುನೀತಾ ಡಿ'ಸೋಜಾ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಕಾನೂನು ಮಾಹಿತಿ ಮತ್ತು ಸ್ವ ಉದ್ಯೋಗದ ಬಗ್ಗೆ ವಿಚಾರಗೋಷ್ಠಿ ನೆರವೇರಿತು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ದಿವಾಕರ್ ಗೋಷ್ಠಿಯನ್ನು ಉದ್ಘಾಟಿಸಿದರು. ಶುಕ್ರವಾರ ಮಧ್ಯಾಹ್ನ ವರ್ಕಾಡಿ ಬೇಕರಿ ಜಂಕ್ಷನ್ ಬಳಿಯಿಂದ ಧರ್ಮನಗರದ ಮಿನಿ ಕ್ರೀಡಾಂಗಣದ ತನಕ ಉತ್ಸವ ವೇದಿಕೆಗೆ ಭವ್ಯ ಮೆರವಣಿಗೆ ನಡೆಯಿತು.
ಇಂದಿನ ಕಾರ್ಯಕ್ರಮ: ಬೆಳಗ್ಗೆ 10 ಗಂಟೆಗೆ ವಿಚಾರಗೋಷ್ಠಿ-
ಕೃಷಿ ಮತ್ತು ಜಲಸಂರಕ್ಷಣೆ, ಆರೋಗ್ಯ ಮತ್ತು ಶುಚಿತ್ವ
ಉದ್ಘಾಟನೆ: ಕಾಸರಗೋಡು ಜಿ.ಪಂ ಸದಸ್ಯೆ ಪುಷ್ಪಾ ಅಮೆಕ್ಕಳ ಅವರಿಂದ
ಮಧ್ಯಾಹ್ನ 2 ಗಂಟೆಗೆ- ಕುಟುಂಬಶ್ರೀ ಕಾರ್ಯಕರ್ತೆಯರಿಂದ ಸಾಂಸ್ಕøತಿಕ ವೈವಿಧ್ಯ
ಅಪರಾಹ್ನ 3 ಕ್ಕೆ- ಅಕ್ಕಿಮುಡಿ ಕುಟ್ಟುವ ಸ್ಪರ್ಧೆ, ತೆಂಗಿನ ಮಡಲು ಹೆಣೆಯುವುದು, ಚಾಪೆ ನೇಯುವ ಸ್ಪರ್ಧೆ, ಬುಟ್ಟಿ ಹೆಣೆಯುವ ಸ್ಪರ್ಧೆ
ಸಾಯಂಕಾಲ 5 ಗಂಟೆಗೆ- ಸಮಾರೋಪ ಸಮಾರಂಭ-ಉದ್ಘಾಟನೆ-ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರಿಂದ, ಕಾರ್ಯಕ್ರಮದ ಅಧ್ಯಕ್ಷತೆ- ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ