ನವದೆಹಲಿ: ಕೊರೋನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು ಈ ನಡುವಲ್ಲೇ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳ ರಕ್ಷಣೆಗೆ ಮುಂದಾಕಿರುವ ಭಾರತ, ಇದೀಗ ನೆರೆ ರಾಷ್ಟ್ರದ ಪ್ರಜೆಗಳಿಗೂ ಸಹಾಯ ಹಸ್ತ ಚಾಚಿದೆ.
ಕೊರೋನಾ ವೈರಸ್ ಆತಂಕಕ್ಕೆ ಸಿಲುಕಿರುವ ಭಾರತ ಸೇರಿದಂತೆ ಇತರೆ ರಾಷ್ಟ್ರಗಳ ವಿದ್ಯಾರ್ಥಿಗಳು ಹಾಗೂ ಪ್ರಜೆಗಳು ಕೊಠಡಿಗಳಿಂದ ಹೊರ ಬರದೆ, ಊಟ ಹಾಗೂ ಅಗತ್ಯ ವಸ್ತುಗಳಿಲ್ಲದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಗೊಳಿಸುವ ಕಾರ್ಯವನ್ನು ಭಾರತ ಸರ್ಕಾರ ಮಾಡುತ್ತಿದೆ. ಸ್ಥಳಾಂತರದ ವೇಳೆ ವಿದೇಶಿ ಪ್ರಜೆಗಳೂ ಕೂಡ ಸಹಾಯ ಮಾಡುವಂತೆ ಮೊರೆ ಇಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೆರೆ ರಾಷ್ಟ್ರಗಳ ಪ್ರಜೆಗಳಿಗೆ ಸಹಾಯ ಹಸ್ತ ಚಾಚಿ ಸಂಕಷ್ಟದಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಹಾಗೂ ಇತರೆ ಪ್ರಜೆಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಮಾಹಿತಿ ನೀಡಿದ್ದು, ಚೀನಾದಲ್ಲಿ ಸಂಕಷ್ಟದಲ್ಲಿರುವ ಪ್ರಜೆಗಳನ್ನು ರಕ್ಷಣೆಗೆ ಎರಡು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಕೇವಲ ನಮ್ಮ ರಾಷ್ಟ್ರದ ಪ್ರಜೆಗಳನ್ನಷ್ಟೇ ಅಲ್ಲದೆ ನೆರೆ ರಾಷ್ಟ್ರದ ಪ್ರಜೆಗಳ ರಕ್ಷಣೆಯನ್ನೂ ಬಾರತ ಮಾಡುತ್ತಿದೆ. ಈಗಾಗಲೇ ಎಲ್ಲಾ ನೆರೆ ರಾಷ್ಟ್ರಕ್ಕೂ ಸಹಾಯ ಮಾಡುವುದಾಗಿ ತಿಳಿಸಿದ್ದೇವೆ. ಈಗಾಗಲೇ ಮಾಲ್ಡೀವ್ಸ್'ನ 7 ಪ್ರಜೆಗಳನ್ನು ರಕ್ಷಣೆ ಮಾಡಿದ್ದೇವೆ. ಇತರೆ ರಾಷ್ಟ್ರಗಳಿಗೂ ಭಾರತ ಸಹಾಯ ಮಾಡಲಿದೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸುತ್ತಿದ್ದೇನೆಂದು ಹೇಳಿದ್ದಾರೆ. ಜನವರಿ 31ರಿಂದ ಫೆಬ್ರವರಿ 1ರವರೆಗೂ ಭಾರತ ಈವರೆಗೂ 654 ಜನರನ್ನು ಭಾರತ ಸ್ಥಳಾಂತರ ಮಾಡಿದೆ. ಇದಲ್ಲಿ 7 ಮಂದಿ ಮಾಲ್ಡೀವ್ಸ್'ನ ಪ್ರಜೆಗಳಿದ್ದಾರೆ. ಓರ್ವ ಬಾಂಗ್ಲಾದೇಶದ ಪ್ರಜೆ ಕೂಡ ಇದ್ದಾರೆ. ಎಲ್ಲಾ ವಿದೇಶಿ ಪ್ರಜೆಗಳನ್ನೂ ಪರೀಕ್ಷಿಸಲಾಗಿದ್ದು, ಯಾರೊಬ್ಬರಲ್ಲೂ ಕೊರೋನಾ ವೈರಸ್ ಪತ್ತೆಯಾಗಿಲ್ಲ. ನೆರೆ ರಾಷ್ಟ್ರ ಪಾಕಿಸ್ತಾನಕ್ಕೂ ಸಹಾಯ ಹಸ್ತ ಚಾಚಿದ್ದೇವೆ. ಆದರೆ, ಆ ರಾಷ್ಟ್ರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಿದರೆ ಈ ಬಗ್ಗೆ ಚಿಂತಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.