ಕಾಸರಗೋಡು: ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳಗಳ ಸಮರ್ಥ ಕಲಾವಿದ ಕಾವು ಕಣ್ಣ ಅವರು ಕಲೆಯ ಶತಪುರುಷ. ಸುಮಾರು ಅರುವತ್ತು ವರ್ಷಗಳ ಸಾರ್ಥಕ ಜೀವನ ನಡೆಸಿದ ಕಾವು ಕಣ್ಣನವರ ಯಕ್ಷಗಾನ ಸಂಪ್ರದಾಯ ಈಗಲೂ ಮುಂದುವರಿಯುತ್ತಿರುವುದು ಅವರ ನಾಟ್ಯ ಪ್ರತಿಭೆಯ ಸಾರ್ವಕಾಲಿಕತೆಗೆ ಸಾಕ್ಷಿ ಎಂದು ಯಕ್ಷಗಾನ ವಿದ್ವಾಂಸ, ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ನೇತೃತ್ವದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಹಿರಿಯರ ನೆನಪು ವಿಶೇಷ ಕಾರ್ಯಕ್ರಮದಲ್ಲಿ ಅವರು ವಿಶೇಷೋಪನ್ಯಾಸವನ್ನು ನೀಡಿ ಮಾತನಾಡಿದರು.
ಕಾವು ಕಣ್ಣ ಅವರ ಗುರುಗಳು ಕುಂಬಳೆ ನರಸಿಂಹ ಎಂದು ಹೇಳಲಾಗುತ್ತದೆ. ಕಾವು ಕಣ್ಣ ಅವರು ಬಾಯಿತಾಳ ಹೇಳುತ್ತಾ ಕೆಲವೊಮ್ಮೆ ಮದ್ದಳೆ ನುಡಿಸುತ್ತಾ ನೃತ್ಯ ಕಲಿಸುತ್ತಿದ್ದ ರೀತಿ ಅನನ್ಯವಾದುದು. ತೆಂಕು ತಿಟ್ಟು ನೃತ್ಯ ಪ್ರಕಾರದಲ್ಲಿ ವೈವಿಧ್ಯ ಮತ್ತು ಆವಿಷ್ಕಾರವನ್ನು ಪರಿಚಯಿಸಿದವರು ಅವರು. ಕುರಿಯ ವಿಠಲ ಶಾಸ್ತ್ರಿ, ಕವಿಭೂಷಣ ವೆಂಕಪ್ಪ ಶೆಟ್ಟಿ, ಶಂಕರ ಬಲ್ಯಾಯ, ನಾರಾಯಣ ಬಲ್ಯಾಯ, ಕೂಡ್ಲು ಆನಂದ, ಕೂಡ್ಲು ದೂಮಪ್ಪ, ಸೂರಿಕುಮೇರಿ ಗೋವಿಂದ ಭಟ್ ಈ ಮುಂತಾದ ಮಹಾನ್ ಕಲಾವಿದರನ್ನು ರೂಪಿಸಿದ ಖ್ಯಾತಿ ಕಾವು ಕಣ್ಣ ಅವರಿಗೆ ಸಲ್ಲುತ್ತದೆ. ಕಾವು ಕಣ್ಣ ಅವರು ಪೀಠಿಕೆ ಮತ್ತು ಎದುರು ವೇಷ ಎರಡನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಹನೂಮಂತನ ತೆರೆ ಕುಣಿತ, ಕೃಷ್ಣನ ಒಡ್ಡೋಲಗ, ಶೂರ್ಪನಖಿಯ ತೆರೆ ಕ್ಲಾಸು ಇವುಗಳನ್ನು ಕಾವು ಕಣ್ಣನವರ ಹಾಗೆ ಮಾಡುವವರೇ ಇರಲಿಲ್ಲ ಎಂಬ ಅಭಿಪ್ರಾಯವಿದೆ. ಋತುಪರ್ಣನ ವೇಷವನ್ನು ವಿಶಿಷ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದ ಅಳಿಕೆ ರಾಮಯ್ಯ ರೈಗಳು ಕಾವು ಕಣ್ಣನವರ ಸಂಪ್ರದಾಯವನ್ನು ಮುಂದುವರೆಸಿದರೆಂದು ಹೇಳಲಾಗುತ್ತದೆ. ಅವರ ಹಾಗೆ ದಕ್ಷ, ಕೀಚಕ, ಉತ್ತರ ಕುಮಾರ, ಅರ್ಜುನ, ದೇವೇಂದ್ರ ಹಾಗೂ ಕೃಷ್ಣನ ಪಾತ್ರಗಳನ್ನು ನಿಭಾಯಿಸುವವರು ಹಿಂದೆಯೂ ಇರಲಿಲ್ಲ; ಈಗಲೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತಿ ಪಡೆದಿದ್ದಾರೆ ಎಂದು ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆಯರು ನಿರ್ವಹಿಸಿ ಮಾತನಾಡಿ, ಯಕ್ಷಗಾನವು ಸರ್ವೋತ್ತಮ ಕಲೆ. ಕಾಸರಗೋಡಿನ ಸಂಸ್ಕøತಿಯಲ್ಲಿ ಯಕ್ಷಗಾನವು ಹಾಸುಹೊಕ್ಕಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಇತ್ತೀಚೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಯಕ್ಷಗಾನವನ್ನು ಎಲ್ಲಾ ಕಡೆ ಪಸರಿಸುವ ಕೆಲಸವನ್ನು ಮಾಡುತ್ತಿದೆ. ಹಿರಿಯರ ನೆನಪು ಕಾರ್ಯಕ್ರಮದ ಮೂಲಕ ಎಲೆಮರೆಯ ಕಾಯಿಯಾಗಿಯೇ ಉಳಿದಿರುವ ಮಹಾನ್ ಕಲಾವಿದರನ್ನು ಹೊಸತಲೆಮಾರಿಗೆ ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದೆ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ವಹಿಸಿ ಮಾತನಾಡಿದರು. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಯಕ್ಷಗಾನ ಸಂಶೋಧನ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ನಾಟ್ಯಗುರು ದಿವಾಣ ಶಿವಶಂಕರ ಭಟ್ ಶುಭ ಹಾರೈಸಿದರು. ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಕೇಂದ್ರದ ವಕ್ತಾರೆ ಸವಿತಾ ಬಿ. ವಂದಿಸಿದರು. ಸುಜಾತಾ ಸಿ.ಎಚ್. ಪ್ರಾರ್ಥಿಸಿದರು. ಯಕ್ಷಗಾನ ಸಂಶೋಧನ ಕೇಂದ್ರದ ಸಂಯೋಜನಾ„ಕಾರಿ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಿದರು.
ಯಕ್ಷಗಾನ ತಾಳಮದ್ದಳೆ : ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಸಂಸ್ಥೆಯ ಯುವಕಲಾವಿದರಿಂದ ವಾಲಿಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಡಾ.ಸತೀಶ್ ಪುಣಿಂಚತ್ತಾಯ, ರೋಹಿಣಿ ದಿವಾಣ, ಚೆಂಡೆಯಲ್ಲಿ ಯೋಗೀಶ್ ಕಡಂಬಳಿತ್ತಾಯ, ಮದ್ದಳೆಯಲ್ಲಿ ಸು„ೀಶ್ ಪಾಣಾಜೆ ಸಹಕರಿಸಿದರು. ಶ್ರೀರಾಮನಾಗಿ ಕಾರ್ತಿಕ್ ಪಡ್ರೆ, ವಾಲಿಯಾಗಿ ಶೇಣಿ ವೇಣುಗೋಪಾಲ, ಸುಗ್ರೀವನಾಗಿ ದಿವಾಕರ ಬಲ್ಲಾಳ್, ತಾರೆಯಾಗಿ ಅನುರಾಧ ಕಲ್ಲಂಕೂಡ್ಲು, ಬಾಲ ಬ್ರಹ್ಮಚಾರಿ ಹನೂಮಂತನಾಗಿ ನವೀನ ಕುಂಟಾರು ಸಹಕರಿಸಿದರು. ಬಳಿಕ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆಯ ಜತೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕನ್ನಡ ವಿಭಾಗದ ಮುಖ್ಯಸ್ಥರು, ಕೇಂದ್ರದ ಸಂಯೋಜನಾ„ಕಾರಿ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಎಸ್.ಎಸ್.ಶಿವರುದ್ರಪ್ಪ ಮಾತನಾಡಿದರು. ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ಡಾ.ರಾಧಾಕೃಷ್ಣ ಬೆಳ್ಳೂರು ವಂದಿಸಿದರು. ಇದೇ ಸಂದರ್ಭದಲ್ಲಿ ಕಣ್ಣೂರು ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಪಿ.ಎಚ್.ಡಿ. ಪದವಿಯನ್ನು ಪಡೆದ ಡಾ.ಸತೀಶ್ ಪುಣಿಂಚತ್ತಾಯ ಅವರಿಗೆ ಪುಸ್ತಕ ನೀಡಿ ಗೌರವಿಸಲಾಯಿತು. ಹಿರಿಯ ಕನ್ನಡಾಭಿಮಾನಿಗಳು, ಕಲಾವಿದರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.