ಅಹಮದಾಬಾದ್ : ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಅಹಮದಾಬಾದ್ ಗೆ ಆಗಮಿಸಲಿದ್ದು, 1917 ರಿಂದ 1930 ರವರೆಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ವಾಸಿಸುತ್ತಿದ್ದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಶ್ರಮದ ಅಧಿಕಾರಿಗಳು ಹೇಳಿದ್ದಾರೆ.
ಟ್ರಂಪ್ ಆಶ್ರಮಕ್ಕೆ ಭೇಟಿ ನೀಡುವ ಬಗ್ಗೆ ಶ್ವೇತಭವನ ಅಧಿಕಾರಿಗಳೊಂದಿಗೆ ಮಾತನಾಡಬೇಕಾಗಿದೆ ಎಂದು ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿಕೆ ನೀಡಿದ್ದರು. ಆದರೆ , ಟ್ರಂಪ್ ದಂಪತಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಂಜೋ ಅಬೆ ಎಲ್ಲರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಸಾಕಷ್ಟು ನಿರೀಕ್ಷಿಸಲಾಗಿದೆ. ಅಹಮದಾಬಾದ್, ನವ ದೆಹಲಿ ಹಾಗೂ ಆಗ್ರಾಕ್ಕೆ ಅವರು ಭೇಟಿ ನೀಡಲಿದ್ದಾರೆ.
ಡೊನಾಲ್ಡ್ ಟ್ರಂಪ್ ಭೇಟಿಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಟ್ರಂಪ್ ಭಾರತ ಪ್ರವಾಸವು ಭಾರತ ಮತ್ತು ಅಮೆರಿಕಾದ ನಡುವಣ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳ್ಳಿಸುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.