ಮಧೂರು: ಭಕ್ತರ ನಿಸ್ವಾರ್ಥ ಸೇವೆಗೆ ದೇವರ ಅನುಗ್ರಹ ಸದಾ ಇರುತ್ತದೆ. ಭಕ್ತಿ, ಶ್ರದ್ಧೆ, ಅರ್ಪಣಾ ಮನೋಭಾವದಿಂದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಭಗವಂತ ಕೈ ಹಿಡಿದು ಮುನ್ನಡೆಸುತ್ತಾನೆ. ಒಳ್ಳೆಯ ಚಿಂತನೆ, ಸತ್ಕಾರ್ಯಗಳ ಮೂಲಕ ಧರ್ಮ, ಸಂಸ್ಕøತಿಯ ರಕ್ಷಣೆ ಸಾಧ್ಯ ಎಂದು ಪೂಜನೀಯ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಆವರು ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಹಾಗೂ ಬ್ರಹ್ಮಕಲಶೋತ್ವವದ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಬುಧವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಕಾರ್ಯಕ್ರಮ ಉದ್ಘಾಟಿಸಿದರು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಕರಾವಳಿ ಪ್ರದೇಶವು ಕಾಲಕಾಲಕ್ಕೆ ನಡೆಯುವ ಪೂಜೆ-ಪುನಸ್ಕಾರ, ಯಜ್ಞ- ಯಾಗಾದಿಗಳಿಂದ ಸಂಪದ್ಭರಿತವಾಗಿದೆ. ದೇಶದಲ್ಲಿ ಏಕತೆ ಜಾಗೃತವಾದಲ್ಲಿ ಮಾತ್ರ ಸಾಮಾನ್ಯನ ಬದುಕು ನಿರಾತಂಕವಾಗಿ ಸಾಗಲು ಸಾಧ್ಯ. ಹೆಣ್ಣು ಮಕ್ಕಳಲ್ಲಿ ಧರ್ಮ, ಸಂಸ್ಕೃತಿ ಮತ್ತು ಸಮಾಜದಲ್ಲಿ ಆಗುವ ಅನ್ಯಾಯಗಳ ಬಗ್ಗೆ ಸೂಕ್ತ ಜ್ಞಾನ ನೀಡಿ ಅತ್ಯಂತ ಸೂಕ್ಷ್ಮವಾಗಿ ಬೆಳೆಸಬೇಕಾದ ಅಗತ್ಯವಿದ್ದು ಮಾತೆಯರು ಆ ಕಾರ್ಯದಲ್ಲಿ ಸದಾ ಜಾಗೃತರಾಗಿರುವಂತೆ ಸೂಚಿಸಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನಗೈದು ಧರ್ಮ ಸಂದೇಶ ನೀಡಿದರು. ಗಣೇಶ್ ನಾಯಕ್ ಉಪಸ್ಥಿತರಿದ್ದರು. ಪ್ರತೀಕ್ಷ ಪ್ರಾರ್ಥನೆ ಹಾಡಿದರು. ಆತಿರುದ್ರ ಮಹಾಯಾಗ ಸಮಿತಿ ಪ್ರಧಾನ ಸಂಚಾಲಕ ನ್ಯಾಯವಾದಿ ಸತೀಶ್ ಕೋಟೆಕಣಿ ಸ್ವಾಗತಿಸಿ, ಶ್ರೀ ಶೈಲ ಮಹಾದೇವ ಸೇವಾ ಟ್ರಸ್ಟ್ ಆಧ್ಯಕ್ಷ ಡಾ,ಜಯಪ್ರಕಾಶ್ ನಾಯಕ್ ವಂದಿಸಿದರು. ಅತಿರುದ್ರ ಮಹಾಯಾಗ ಸಮಿತಿ ಮಾರ್ಗದರ್ಶಕ ಮಂಡಳಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ನಿರೂಪಿಸಿದರು.
ಮಧ್ಯಾಹ್ನ ಶ್ರೀ ಕೃಷ್ಣಾನುಗ್ರಹ ಪುರಸ್ಕøತ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರಿಂದ ದ್ವಾದಶ ಜ್ಯೋತಿರ್ಲಿಂಗ ಹರಿಕಥೆ ಮತ್ತು ಮಹಿಳಾ ಯಕ್ಷ ಕೂಟದಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಶ್ರೀ ಶೈಲಂ ಯಾಗ ಶಾಲೆಯಲ್ಲಿ ಪುಣ್ಯಾಹವಾಚನೆ, ಋಗ್ವವಣೆ, ರುದ್ರ ಪಾರಾಯಣ ಮಂಟಪ ಸಂಸ್ಕಾರ ಹಾಗೂ ಅತಿರುದ್ರ ಮಹಾಯಾಗದಂಗವಾಗಿ ಶ್ರೀ ರುದ್ರ ಕಲಶ ಪೂಜೆ. ಶ್ರೀ ರುದ್ರ ಹೋಮ, ಶ್ರೀ ರುದ್ರ ಜಪ ರುದ್ರಜಪ ಘನಪಾರಾಯಣ ನಡೆಯಿತು. ಶ್ರೀಶೈಲೇಶ್ವರ ಮಂಟಪದಲ್ಲಿ ಶ್ರೀ ಕ್ಷೇತ್ರ ತಂತ್ರಿವರ್ಯರ ನೇತೃತ್ವದಲ್ಲಿ ಅಷ್ಟೋತ್ತರ ಶತ ನಾಳೀಕೇರ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ, ವಾಸ್ತುಪೂಜೆ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ಅಂಕುರಾರ್ಪಣೆ ಜರಗಿತು.