ಕಾಸರಗೋಡು: ಮುಂಬಯಿಯ ಅಂಧೇರಿ ಕರ್ನಾಟಕ ಸಂಘವು ಕೊಡಮಾಡುವ ಪ್ರತಿಷ್ಠಿತವಾದ ಪ್ರಥಮ `ಕನ್ನಡ ಸಾಹಿತ್ಯ ಸಾಧಕ ಪ್ರಶಸ್ತಿ'ಗೆ ಕಾಸರಗೋಡಿನ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರು ಅರ್ಹರಾಗಿದ್ದಾರೆ. ಸಾಹಿತ್ಯ ವಲಯದ ಅವರ ಸಮಗ್ರ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುವುದಾಗಿ ಅಂಧೇರಿ ಕರ್ನಾಟಕ ಸಂಘದ ಅಧ್ಯಕ್ಷ ಹ್ಯಾರಿ ಸಿಕ್ವೇರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೆ.22 ರಂದು ಅಪರಾಹ್ನ ಮುಂಬಯಿಯ ಬಿಲ್ಲವರ ಎಸೋಸಿಯೇಶನ್ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಜರಗಲಿರುವುದಾಗಿಯೂ ಅವರು ತಿಳಿಸಿದ್ದಾರೆ.
ಸೂಕ್ಷ್ಮ ಸಂವೇದನಾಶೀಲ ಪತ್ರಕರ್ತ, ಲೇಖಕ, ಸಮರ್ಥ ಸಂಘಟಕರಾಗಿರುವ ರವಿ ನಾಯ್ಕಾಪು ಅವರು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ನಾರಾಯಣಮಂಗಲ ನಿವಾಸಿ. ದೇವತಾ ಮನುಷ್ಯ ಸಾಯಿರಾಂ ಭಟ್ಟರ ಜೀವನ ಚರಿತ್ರೆಯ ಬಗ್ಗೆ ಬೆಳಕು ಚೆಲ್ಲಿದ `ದಾನಗಂಗೆ' ಹಾಗೂ ದಮನಿತರ ಆಶಾಕಿರಣ `ಸ್ನೇಹಾಲಯ' ಅಭಯ ಕೇಂದ್ರದ ರೂವಾರಿ ಜೋಸೆಫ್ ಕ್ರಾಸ್ತಾ ಅವರ ಬಗ್ಗೆ ಬರೆದ `ಸ್ನೇಹಗಂಗೆ' ಇವೆರಡು ಪ್ರಕಟಿತ ಕೃತಿಗಳು. ಭಜನಾಗ್ರೇಸರ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಬದುಕಿನ ಬಗ್ಗೆ ಬೆಳಕು ಚೆಲ್ಲುವ `ಗಾನಗಂಗೆ' ಪ್ರಕಟಣೆಯ ಹಾದಿಯಲ್ಲಿದೆ.
ಕಳೆದೆರಡು ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕಾ - ದೃಶ್ಯ ಮಾಧ್ಯಮಗಳೆರಡರಲ್ಲೂ ಸೈಎನಿಸಿರುವ ಅವರು ಅನೇಕ ಮಾಧ್ಯಮಗಳಲ್ಲಿ ದುಡಿದಿದ್ದಾರೆ. ಸಾಮಾಜಿಕ ಸ್ಪಂದನದ, ಮಾನವೀಯ ಕಳಕಳಿಯ ನೂರಾರು ಬರಹಗಳು, ವ್ಯಕ್ತಿ, ಪ್ರತಿಭಾ ಪರಿಚಯ ಬರವಣಿಗೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದೂರದರ್ಶನ ಚಾನೆಲ್‍ಗಳ ಸುದ್ದಿ ಸಂಪಾದಕ, ವಾರ್ತಾ ವಾಚಕನಾಗಿಯೂ ದುಡಿದು ಪ್ರಮುಖ ವ್ಯಕ್ತಿಗಳೊಂದಿಗೆ ವಿಶೇಷ ಚಾನೆಲ್ ಸಂದರ್ಶನಗಳನ್ನು ನಡೆಸಿದ್ದಾರೆ. ಕ್ರಿಯಾಶೀಲ ಸೇವೆಗಾಗಿ ಅನೇಕ ಕಡೆಗಳಲ್ಲಿ ಪುರಸ್ಕಾರ, ಅಭಿನಂದನೆ, ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ, ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಘಟಕದ ಕೋಶಾಧಿಕಾರಿ ಸಹಿತ ಅನೇಕ ಸಂಘಟನೆಗಳಲ್ಲಿ ಸಕ್ರಿಯರು. ಕನ್ನಡ ಕಾರ್ಯಕ್ರಮಗಳ ನಿರೂಪಕ ಕೂಡಾ ಆಗಿದ್ದಾರೆ.