ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ದೇಶದಲ್ಲಿ ಬಹು ಚರ್ಚೆಗೆ ಒಳಗಾಗಿದ್ದು, ಇಂತಹ ಸಂದರ್ಭದಲ್ಲಿ ದೇಶ ಒಡೆಯದೇ ಅಖಂಡ ಭಾರತದ ರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್. ವೆಂಕಟೇಶ ಮೂರ್ತಿ ಹೇಳಿದ್ದಾರೆ.
ಸಿಎಎ ಬಗ್ಗೆ ದೇಶದ ಜನರಿಗೆ ಸ್ಪಷ್ಟ ಅರಿವು ಮೂಡಿಸಬೇಕಾದ ಅಗತ್ಯವಿದೆ. ಭಾರತವನ್ನು ಒಡೆಯದೇ ಅಖಂಡ ದೇಶವಾಗಿ ಮುನ್ನೆಡೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಕನಸು ನನಸಾಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಸಭಾಸದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಗಳಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಆಂಧ್ರದಲ್ಲಿ ಕನ್ನಡ ಶಾಲೆ ಮುಚ್ಚದಂತೆ ಎಚ್ಚರವಹಿಸಲು ಸರಕಾರಕ್ಕೆ ಒತ್ತಾಯ:
ಶುಕ್ರವಾರ ಸಂಜೆ ನಡೆದ ಬಹಿರಂಗ ಸಮಾವೇಶದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಸಮ್ಮೇಳನಾಧ್ಯಕ್ಷ ಎಚ್.ಎಸ್ ವೆಂಕಟೇಶ ಮೂರ್ತಿ ಸಮ್ಮುಖದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ, ಮಹಾರಾಷ್ಟ್ರ ಗಡಿ ಕ್ಯಾತೆ ಹಾಗೂ ಆಂಧ್ರಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಕ್ರಮವನ್ನು ಖಂಡಿಸಿದೆ. ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ವೇದಿಕೆ ಆಗ್ರಹಿಸಿದೆ.
ಇತ್ತಿಚಿಗಷ್ಟೇ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಂಧ್ರದಲ್ಲಿ ತೆಲುಗು ಹೊರೆತುಪಡಿಸಿ, ಇಂಗ್ಲಿಷ್ ಅಥವಾ ಉರ್ದು ಮಾಧ್ಯಮದಲ್ಲಿ ಮಾತ್ರ ಕಲಿಸಬೇಕು ಎಂದು ಹೊರಡಿಸಿರುವ ಫರ್ಮಾನನ್ನು ಖಂಡಿಸಿದ್ದು, ಆಂಧ್ರಪ್ರದೇಶ ಸರಕಾರ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಅಷ್ಟೇ ಅಲ್ಲದೇ ಗಡಿಭಾಗದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚದ ರೀತಿ ರಾಜ್ಯ ಸರಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಮಧ್ಯೆ ಗಡಿನಾಡು ಕಾಸರಗೋಡು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಧ್ವನಿಯೆತ್ತದಿರುವುದು ಆಶ್ಚರ್ಯ ಹಾಗೂ ಅಸಮಧಾನಕ್ಕೂ ಕಾರಣವಾಗಿದೆ.