ಬದಿಯಡ್ಕ: ಹತ್ತನೇ ತರಗತಿಯ ಪರೀಕ್ಷಾ ಪೂರ್ವಸಿದ್ಧತೆಯ ಸಲುವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನೀರೊಳಿಕೆ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ವಿದ್ಯಾರ್ಥಿಗಳಿಗೆ ತರಗತಿಯನ್ನು ನಡೆಸಿಕೊಟ್ಟರು. ಹತ್ತನೇ ತರಗತಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆ ಎಂಬ ಆತಂಕವಿರುವುದು ಸಹಜ. ಅದನ್ನು ನಿವಾರಿಸಿ ಸ್ವಪ್ರಯತ್ನ ಮುಖೇನ ಅತ್ಯಧಿಕ ಅಂಕ ಗಳಿಸುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ದಿನಚರಿಯ ರೂಪರೇಷೆಯು ಇದಕ್ಕೆ ಅಡಿಪಾಯವಾಗಿದೆ. ಅಧ್ಯಾಪಕರ ನಿರಂತರ ಮಾರ್ಗದರ್ಶನ ಪಾಲಕರ ಪ್ರೋತ್ಸಾಹದ ನುಡಿಗಳು ಇನ್ನಷ್ಟು ಸಾಧನೆಯನ್ನು ಮಾಡುವುದಕ್ಕೆ ಪ್ರೇರಣೆಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು, ಅಧ್ಯಾಪಕ ವೃಂದ ಜೊತೆಗಿದ್ದರು. ವಿದ್ಯಾರ್ಥಿಗಳಿಂದ ಮಾತೃವಂದನೆ ಭಾವಪೂರ್ಣವಾಗಿ ಜರಗಿತು. ವಿದ್ಯಾರ್ಥಿಗಳು ಯೋಗಾಚಾರ್ಯರನ್ನು ಅಧ್ಯಾಪಕ ವೃಂದದ ಜೊತೆಗೂಡಿ ಗೌರವಿಸಿದರು. ತರಗತಿ ಅಧ್ಯಾಪಿಕೆ ರಶ್ಮಿ ಪೆರ್ಮುಖ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.