ಮಂಜೇಶ್ವರ: ರಂಗ ಶಿಕ್ಷಣವು ಎಲ್ಲಡೆ ಎಲ್ಲರಿಗೂ ಲಭ್ಯವಾಗಬೇಕು. ವ್ಯಕ್ತಿಯ ವ್ಯಕ್ತಿತ್ವ ನಿರೂಪಣೆಯಲ್ಲಿ ಪ್ರಧಾನ ಪಾತ್ರವಹಿಸಬಹುದಾದ ರಂಗ ಶಿಕ್ಷಣವು ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆಗಳನ್ನು ಮೂಡಿಸುವುದರೊಂದಿಗೆ ಶೈಕ್ಷಣಿಕ, ಸಾಮಾಜಿಕ ಮುನ್ನಡೆಗೆ ಕಾರಣವಾಗುತ್ತದೆ ಎಂದು ತಲೇಕಳ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ಬಣ್ಣ ಭಂಡಾರಿ ಅವರು ತಿಳಿಸಿದರು.
ರಂಗ ಚೇತನಾ ಕಾಸರಗೋಡು ಇದರ ನೇತೃತ್ವದಲ್ಲಿ ತಲೇಕಳ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ರಂಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯ ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಉದಯ ಸಾರಂಗ್, ವಸಂತ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು. ರಂಗ ಚೇತನದ ಕಾರ್ಯದರ್ಶಿ, ಶಿಬಿರದ ನಿರ್ದೇಶಕ ಅಶೋಕ ಮಾಸ್ತರ್ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಮಾಸ್ತರ್ ಸ್ವಾಗತಿಸಿ, ರೂಪೇಶ್ ಮಾಸ್ತರ್ ವಂದಿಸಿದರು. ಕವಿತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗಗೈಯ್ಯುತ್ತಿರುವ ಮಕ್ಕಳಲ್ಲಿ ರಂಗಾಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳ ಕನ್ನಡ ಮಾಧ್ಯಮಕ್ಕೆ ಹೆಚ್ಚಿನ ದಾಖಲಾತಿ ಮತ್ತು ವಿದ್ಯಾರ್ಥಿಗಳ ರಕ್ಷಕರ ಪಾಲ್ಗೊಳ್ಳುವಿಕೆಯನ್ನು ಉತ್ತಮ ಪಡಿಸಲು ಸಹಕಾರಿಯಾಗುವ ಉದ್ದೇಶವಿರಿಸಿ ರಂಗ ಚೇತನ ಶಿಬಿರ ಆಯೋಜಿಸುತ್ತಿದೆ.