ಕಾಸರಗೋಡು: ವಿದೇಶದಲ್ಲಿ ನೌಕರಿ ಒದಗಿಸುವುದಾಗಿ ಆಮಿಷ ನೀಡಿ ಹಣ ಕಬಳಿಸುವ ಏಜೆನ್ಸಿಗಳು ರಾಜ್ಯದಲ್ಲಿ ಸಕ್ರಿಯವಾಗಿವೆ. ಈ ಬಗ್ಗೆ ಅತೀವ ಜಾಗ್ರತೆ ಬೇಕು ಎಂದು ರಾಜ್ಯ ಯುವಜನ ಆಯೋಗ ಅಧ್ಯಕ್ಷೆ ಚಿಂತಾ ಜೇರೋಂ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜ್ಯ ಯುವಜನ ಆಯೋಗದ ಜಿಲ್ಲಾ ಮಟ್ಟದ ಅದಾಲತ್ ವೇಳೆ ಅವರು ಮಾತನಾಡಿದರು.
ಈ ಸಂಬಂಧ ವಿವಿಧ ಜಿಲ್ಲೆಗಳಿಂದ ಸುಮಾರು 30 ದೂರುಗಳು ಲಭಿಸಿವೆ. ಈ ಬಗ್ಗೆ ತನಿಖೆ ನಡೆಸಿದ ಪರಿಣಾಮ ಹಣ ಕಳಕೊಂಡವರಲ್ಲಿ ಕೆಲವರಿಗೆ ಮೊಬಲಗು ಮರಳಿಸಲೂ ಆಯೋಗಕ್ಕೆ ಸಾಧ್ಯವಾಗಿದೆ. ಆದರೆ ಬಹುಪಾಲು ಮಂದಿಗೆ ಹಣ ಮರಳಿ ಲಭಿಸಿಲ್ಲ ಎಂಬುದು ಗಂಭೀರ ಸಮಸ್ಯೆ. ವಿದೇಶಗಳಲ್ಲಿ ಕಲಿಕೆಯ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಒದಗಿಸುವ ಆಮಿಷ ನೀಡಿಯೂ ಹಣ ವಂಚಿಸಲಾಗುತ್ತಿದೆ. ಈ ಸಂಬಂಧ ಕಾಸರಗೋಡು ಜಿಲ್ಲೆಯಿಂದ ಎರಡು ದೂರುಗಳೂ ಲಭಿಸಿವೆ. ಇಂಥಾ ಏಜೆನ್ಸಿಗಳ ಬಗ್ಗೆ ಖಚಿತತೆ ಲಭಿಸಿದ ನಂತರವಷ್ಟೇ ಉದ್ಯೋಗಾರ್ಥಿಗಳು ಮುಂದಿನ ಕ್ರಮಕ್ಕೆ ಯತ್ನಿಸಬೇಕು ಎಂದವರು ಸಲಹೆ ಮಾಡಿದರು.
ಕಲ್ಲಿಕೋಟೆ ಜಿಲ್ಲೆಯನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಏಜೆನ್ಸಿಯೊಂದು ಇಬ್ಬರು ಯುವಕರಿಂದ ಇದೇ ರೀತಿ 2 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂ„ಸಿ ಅದಾಲತ್‍ನಲ್ಲಿ ವಿಚಾರಣೆ ನಡೆಸಿದ ವೇಳೆ ಯುವಕ ಬ್ಯಾಂಕ್ ಖಾತೆಗೆ ಮೊಬಲಗು ಮರಳಿಸಿರುವುದಾಗಿ ಆರೋಪಿ ಸಂಸ್ಥೆಯ ಪ್ರತಿನಿಧಿಗಳು ಉತ್ತರ ನೀಡಿದ್ದಾರೆ. ಈ ಸಂಸ್ಥೆಯ ಕುರಿತು ಹೆಚ್ಚುವರಿ ತನಿಖೆ ನಡೆಸುವುದಾಗಿ ಆಯೋಗ ಅಧ್ಯಕ್ಷೆ ಸ್ಪಷ್ಟಪಡಿಸಿದರು.