ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಪೆರಿಯ ಕ್ಯಾಂಪಸ್‍ನ ಕ್ರೀಡಾವಿಭಾಗಕ್ಕೆ ಹೆಚ್ಚಿನ ಸವಲತ್ತು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಮಾನವಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಕ್ರಿಯಾಲ್ ತಿಳಿಸಿದ್ದಾರೆ.
ಅವರು ಮಂಗಳವಾರ ಕೇಂದ್ರೀಯ ವಿಶ್ವ ವಿದ್ಯಾಲಯದ ಸ್ಕೂಲ್ ಆಫ್ ಎಜ್ಯುಕೇಶನ್‍ನ ವತಿಯಿಂದ ನಿರ್ಮಿಸಲಾದ ಹೊಸ ಅಕಾಡಮಿಕ್ ಬ್ಲಾಕ್ "ಸರಸ್ವತೀ'ಯ ಉದ್ಘಾಟನೆ ನಡೆಸಿ ಮಾತನಾಡಿದರು.
ಕ್ಯಾಂಪಸ್‍ನಲ್ಲಿ 138ಕೋಟಿ ರೂ. ಮೊತ್ತದ ನಿರ್ಮಾಣಕಾಮಗಾರಿ ನಡೆದುಬರುತ್ತಿದ್ದು, ಇದರೊಂದಿಗೆ ಕ್ರೀಡಾವಲಯವನ್ನು ಅಭಿವೃದ್ಧಿಪಡಿಸಲು ಸಮಗ್ರ ಕಾರ್ಯಯೋಜನೆ ಶೀಘ್ರ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಮದನ್ ಮೋಹನ್ ಮಾಳವೀಯ ನ್ಯಾಶನಲ್ ಮಿಶನ್ ಆನ್ ಟೀಚಿಂಗ್ ಏಂಡ್ ಟೀಚರ್ಸ್ ಪ್ರೋಜೆಕ್ಟ್‍ನ ಅಧೀನದಲ್ಲಿ ಹೊಸ ಬ್ಲಾಕ್ ನಿರ್ಮಿಸಲಾಗಿದೆ. ಇದೇ ಸಂದರ್ಭ ಹೊಸ ಆಡಳಿತ ಕಟ್ಟಡದ ಶಿಲಾನ್ಯಾಸವನ್ನೂ ಸಚಿವರು ನೆರವೇರಿಸಿದರು.
ಕೇಂದ್ರೀಯ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಜಿ.ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮದನ್ ಮೋಹನ್ ಮಾಳವೀಯ ನ್ಯಾಶನಲ್ ಮಿಶನ್ ಆನ್ ಟೀಚಿಂಗ್ ಏಂಡ್ ಟೀಚರ್ಸ್ ಪ್ರೋಜೆಕ್ಟ್‍ನ ಶೈಕ್ಷಣಿಕ ವಿಭಾಗ ಮುಖ್ಯಸ್ಥ ಡಾ. ಅಮೃತ್ ಜಿ.ಕುಮಾರ್, ಸ್ಕೂಲ್ ಆಫ್ ಎಜ್ಯುಕೇಶನ್ ಡೀನ್ ಡಾ. ಮಹಮ್ಮದುಣ್ಣಿ, ಸಿಪಿಡಬ್ಲ್ಯೂಡಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಯರಾಜನ್, ವಿಶ್ವ ವಇದ್ಯಾಲಯದ ಇಂಜಿನಿಯರ್ ಕೆ.ಜಿ ರಾಜಗೋಪಾಲ್, ಸಹಾಯಕ ಉಪ ಕುಲಪತಿ ಜಯಪ್ರಸಾದ್, ರಿಜಿಸ್ಟ್ರಾರ್ ಡಾ. ಎ.ರಾಧಾಕೃಷ್ಣನ್ ುಪಸ್ಥಿತರಿದ್ದರು.