ಮಂಗಳೂರು: ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಅಸ್ಮಿತೆ ಅಪೂರ್ವವಾದುದು. ಬಹುಭಾಷಾ ವೈವಿಧ್ಯತೆಗಳ ಮಧ್ಯೆ ಗಡಿನಾಡಿನ ಕನ್ನಡದ ಗಟ್ಟಿತನ ಇತರೆಡೆಗಳಿಗೆ ಮಾದರಿಯಾಗಿ ಸಮಗ್ರ ಕನ್ನಡ ನಾಡಿಗೆ ಕಳಶಪ್ರಾಯವಾಗಿದೆ ಎಂದು ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆ ಸಮೀಪದ ಅನಂತಪುರ ಶ್ರೀಕ್ಷೇತ್ರ ಪರಿಸರದಲ್ಲಿ ಏ. 10 ರಿಂದ 12ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕನ್ನಡ ಸಿರಿ-2020 ರಾಷ್ಟ್ರೀಯ ಕನ್ನಡ ಸಮ್ಮೇಳನದ ಯಶಸ್ವಿ ನಿರ್ವಹಣೆಗಾಗಿಯ ಶನಿವಾರ ಸಂಜೆ ಮಂಗಳೂರು ಹೋಟೆಲ್ ವುಡ್ ಲ್ಯಾಂಡ್ಸ್‍ನಲ್ಲಿ ಹಮ್ಮಿಕೊಳ್ಳಲಾದ ಮಂಗಳುರು ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಾಸರಗೋಡಿನ ಸಾಂಸ್ಕøತಿಕ, ಸಾಹಿತ್ತಿಕ, ಸಾಮಾಜಿಕ ಕನ್ನಡ ಭಾಷಾ ಕೊಡುಗೆಗಳು, ಸಾಧನೆಗಳ ಮೇರುತ್ವದ ಮಧ್ಯೆ ವರ್ತಮಾನದ ತಲ್ಲಣಗಳಿಂದ ಕಂಗೆಡುವ ಭೀತಿ ಇದೆ. ಈ ಮಧ್ಯೆ ಕನ್ನಡ ಶಕ್ತಿಯ ಪ್ರತೀಕವಾಗಿ ವಿವಿಧ ಚಿಂತನೆಗಳಿಂದ ಆಯೋಜಿಸಲಾಗುವ ಕನ್ನಡ ಸಿರಿ ಉತ್ಸವಕ್ಕೆ ಸಮಸ್ತ ಕನ್ನಡಿಗರ ಬೆಂಬಲ ಎಲ್ಲಾ ಸ್ತರಗಳಿಂದಲೂ ಮೂಡಿಬರಲಿ ಎಂದು ಅವರು ತಿಳಿಸಿದರು.
ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ವಿ.ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ರಾಮಚಂದ್ರ ಬೈಕಂಪಾಡಿ, ಪ್ರವೀಣ್ ಕುಮಾರ್ ಕೊಡಿಯಾಲಬೈಲು, ಅನಿಲ್ ದಾಸ್ ಕರವೇ, ನ್ಯಾಯವಾದಿ.ಮೋಹನದಾಸ ರೈ, ಡಾ.ಮಾಲತಿ ಶೆಟ್ಟಿ ಮಾಣೂರು, ಮಾಧವ ಭಂಡಾರಿ, ವಿನುತ ನಾಯ್ಕ್, ರಾಧಿಕಾ, ಸುಜಾತಾ ಸುವರ್ಣ, ಪರಮೇಶ್ವರ ಪೂಜಾರಿ, ಭಾಸ್ಕರ ರೈ ಕುಕ್ಕುವಳ್ಳಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಲಕ್ಷ್ಮೀನಾರಾಯಣ ರೈ ಹರೇಕಳ ಮೊದಲಾದವರು ಉಪಸ್ಥಿತರಿದ್ದ ಮಾರ್ಗದರ್ಶನ ನೀಡಿದರು.
ಈ ಸಂದರ್ಭ ಅನಂತಪುರ ಕನ್ನಡ ಸಿರಿ ಸಮ್ಮೇಳನದ ಮಂಗಳೂರು ಸಮಿತಿ ರಚಿಸಲಾಯಿತು. ಗೌರವ ಸಲಹೆಗಾರರಾಗಿ ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಅಣ್ಣಯ್ಯ ಕುಲಾಲ್, ಗೌರವಾಧ್ಯಕ್ಷರಾಗಿ ರಾಮಚಂದ್ರ ಬೈಕಂಪಾಡಿ, ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಕೊಡಿಯಾಲಬೈಲು, ಉಪಾಧ್ಯಕ್ಷರಾಗಿ ಅನಿಲ್ ದಾಸ್ ಕರವೇ, ಪರಮೇಶ್ವರ ಪೂಜಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮೋಹನದಾಸ್ ರೈ, ಕಾರ್ಯದರ್ಶಿಗಳಾಗಿ ಡಾ.ಮಾಲತಿ ಶೆಟ್ಟಿ ಮಾಣೂರು, ಮಾಧವ ಭಂಡಾರಿ, ವಿನುತಾ ನಾಯ್ಕ್, ಸಂಚಾಲಕರಾಗಿ ಯು.ಆರ್.ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಪ್ರಕಾಶ್ ಕದ್ರಿ, ನರೇಶ್ ಸಸಿಹಿತ್ಲು, ಹರೀಶ್ ಶೆಟ್ಟಿ ಮಂಗಳೂರು, ಸುಜಾತಾ ಸುವರ್ಣ, ಅನಿತಾ ಭಂಡಾರ್ಕರ್, ಯಶ್ವಂತ್ ಪೂಜಾರಿ, ರಾಧಿಕಾ ಅವರನ್ನು ಆರಿಸಲಾಯಿತು. ಸಾಂಸ್ಕøತಿಕ ಸಮಿತಿ ಸಂಚಾಲಕರಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಆಯ್ಕೆಮಾಡಲಾಯಿತು.
ಭಾಸ್ಕರ ಕಾಸರಗೋಡು ಕನ್ನಡ ಸಿರಿ ಕಾರ್ಯಕ್ರಮದ ರೂಪರೇಖೆಗಳ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಡಾ.ರಾಜೇಶ್ ಆಳ್ವ ಬದಿಯಡ್ಕ ನಿರೂಪಿಸಿ ವಂದಿಸಿದರು.