ನವದೆಹಲಿ: ಪಾಕಿಸ್ತಾನದ ಬಿಎಟಿ- ಗಡಿ ಕಾರ್ಯಾಚರಣೆ ತಂಡದಿಂದ ಎದುರಾಗುವ ಯಾವುದೇ ಅಡ್ಡಿ ಆತಂಕಗಳಿಗೆ ಅವಕಾಶ ನೀಡುವುದಿಲ್ಲ, ಮುಂಚಿತವಾಗಿಯೇ ಅವರ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನಾರವಾನೆ ತಿಳಿಸಿದ್ದಾರೆ.
ನಾವು ಒಳ ಮಾಹಿತಿಗಳನ್ನು ಪಡೆಯುತ್ತಿದ್ದೇವೆ. ಪಾಕಿಸ್ತಾನ ಸೇನೆಯ ಗಡಿ ಕಾರ್ಯಾಚರಣೆ ತಂಡ ಕಾರ್ಯಾಚರಣೆ ಕೈಗೊಳ್ಳುವ ಮುನ್ನವೇ ನಾವು ಅವರ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದ್ದೇವೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಅವರು ತಿಳಿಸಿದ್ದಾರೆ. ಲಷ್ಕರ್ ಇ- ತೊಯ್ಬಾ, ಜೈಷ್ -ಇ- ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳ ಜೊತೆಗೆ ಪಾಕ್ ಸೇನಾ ಸಿಬ್ಬಂದಿ, ಪಾಕಿಸ್ತಾನದ ಗಡಿ ಕಾರ್ಯಾಚಾರಣೆ ತಂಡ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತದ ವಿರುದ್ಧ ಆಗಾಗ್ಗೆ ಕಾರ್ಯಾಚರಣೆ ನಡೆಸುವುದರಲ್ಲಿ ನಿರತವಾಗಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ 15ರಿಂದ 20 ಉಗ್ರರ ಶಿಬಿರಗಳಿವೆ. ಅಲ್ಲಿ ಯಾವುದೇ ಸಮಯದಲ್ಲೂ ಸುಮಾರು 250ರಿಂದ 350 ಉಗ್ರರಿರುತ್ತಾರೆ. ಈ ಸಂಖ್ಯೆಗಳು ಪರಿಸ್ಥಿತಿಗನುಗುಣವಾಗಿ ಬದಲಾಗಬಹುದು ಎಂದು ನಾರವಾನೆ ಹೇಳಿದರು. ದೆಹಲಿ ಕಂಟೋನ್ಮೆಂಟ್‍ನಲ್ಲಿ ಹೊಸದಾಗಿ ಸ್ಥಾಪಿಸಲು ಪ್ರಸ್ತಾಪಿಸಲಾಗಿರುವ 'ಥಲ್ ಸೇನಾ ಭವನ' ಕುರಿತು ಮಾತನಾಡಿದ ಸೇನಾ ಮುಖ್ಯಸ್ಥರು ಇದರಿಂದ ದಕ್ಷತೆ ಸುಧಾರಿಸುವುದಾಗಿ ತಿಳಿಸಿದರು.
"ಉದ್ದೇಶಿತ ಥಲ್ ಸೇನಾ ಭವನವು ಎಲ್ಲಾ ಸೇನಾ ಪ್ರಧಾನ ಕಚೇರಿಗಳನ್ನು ಒಂದೇ ಸೂರಿನಡಿ ತರುತ್ತದೆ, ಇದರಿಂದಾಗಿ ಇಂಗಾಲದ ಪ್ರಮಾಣ ಮತ್ತು ಕಾರ್ಯತಂತ್ರವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸದ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ನಾರವಾನೆ ಹೇಳಿದರು.