ಬದಿಯಡ್ಕ: ಕಾಸರಗೋಡಿನ ಕನ್ನಡ ಭಾಷಾ ಸಂಪನ್ನತೆಯನ್ನು ಕಾಪಿಡುವ ನಿಟ್ಟಿನಲ್ಲಿ ಬಹುಮುಖಿ ಆಯಾಮಗಳ ಚಟುವಟಿಕೆಗಳಿಗೆ ತೆರೆದುಕೊಳ್ಲಲಿರುವ ಕನ್ನಡ ಸಿರಿ ಸಮ್ಮೇಳನ ಅಸ್ಮಿತೆಯ ಸಂಕೇತವಾಗಿ ಯಶಸ್ವಿಯಾಗುವುದು. ಕನ್ನಡದ ಯುವ ಮನಸ್ಸು ಸಂಘಟನಾತ್ಮಕವಾಗಿ ಭಾಷಾ ಪರವಾದ ನಿಖರ ಧೋರಣೆಯನ್ನು ಮೈಗೂಡಿಸುವ ನಿಟ್ಟಿನಲ್ಲಿ ಸಮ್ಮೇಳನ ಪ್ರೇರಣೆಯಾಗಲಿ ಎಂದು ಬದಿಯಡ್ಕದ ಕ್ರಿಯೆಟಿವ್ ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಅವರು ತಿಳಿಸಿದರು.
ಅನಂತಪುರದಲ್ಲಿ ಏಪ್ರಿಲ್ 10 ರಿಂದ 12ರ ವರೆಗೆ ನಡೆಯಲಿರುವ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧೆಡೆ ಸಂಘಟಿಸಲಾಗುವ ಪ್ರಾದೇಶಿಕ ಮತ್ತು ಯುವ ಸಮಿತಿಗಳ ರೂಪೀಕರಣದ ಭಾಗವಾಗಿ ಬದಿಯಡ್ಕದ ಕ್ರಿಯೆಟಿವ್ ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಕನ್ನಡ ಹೋರಾಟ ಸಮಿತಿ ಮುಖಂಡ ಎಂ.ವಿ.ಮಹಾಲಿಂಗೇಶ್ವರ ಭಟ್, ಕಸಾಪ ಜಿಲ್ಲಾ ಸಮಿತಿ ಸದಸ್ಯ ನವೀನ್ ಮಾಸ್ತರ್ ಮಾನ್ಯ ಉಪಸ್ಥಿತರಿದ್ದು ಮಾತನಾಡಿದರು. ಕನ್ನಡ ಸಿರಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿ ಸಮ್ಮೇಳನದ ಸಮಗ್ರ ಮಾಹಿತಿ ನೀಡಿದರು. ಪ್ರಾಧ್ಯಾಪಕ ವಿಷ್ಣುಪ್ರಕಾಶ್ ಮುಳ್ಳೇರಿಯ ಸ್ವಾಗತಿಸಿ, ನಿರೂಪಿಸಿದರು. ಪ್ರಾಧ್ಯಾಪಕಿ ಕವಿತಾ ಟೀಚರ್ ವಂದಿಸಿದರು.
ಈ ಸಂದರ್ಭ ಕ್ರಿಯೆಟಿವ್ ಕಾಲೇಜು ವಿದ್ಯಾರ್ಥಿಗಳ ಹಾಗೂ ಶಿಕ್ಷಕರನ್ನೊಳಗೊಂಡ ಸಮಿತಿಗೆ ರೂಪು ನೀಡಲಾಯಿತು. ಸಮಿತಿ ಗೌರವಾಧ್ಯಕ್ಷರಾಗಿ ಪ್ರಾಂಶುಪಾಲ ಶಿವದಾಸ್, ಅಧ್ಯಕ್ಷರಾಗಿ ಕವಿತಾ ಟೀಚರ್, ಉಪಾಧ್ಯಕ್ಷರಾಗಿ ಮೇಘಾ ಟೀಚರ್, ದೀಕ್ಷಿತ, ಕಾರ್ಯದರ್ಶಿಯಾಗಿ ವಿಷ್ಣುಪ್ರಕಾಶ್ ಮುಳ್ಳೇರಿಯ, ಜೊತೆ ಕಾರ್ಯದರ್ಶಿಗಳಾಗಿ ವಿನಯ, ಸೌಮ್ಯ ಅವರನ್ನು ಆರಿಸಲಾಯಿತು.