ಕಲಬುರಗಿ: ತಂತ್ರಾಂಶದಲ್ಲಿ ಕನ್ನಡದ ಬಳಕೆ ಇನ್ನಷ್ಟು ಹೆಚ್ಚಾಗಲು ಸರ್ಕಾರ ಪ್ರಯತ್ನಿಸಬೇಕು ಎಂದು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಸಲಹೆ ನೀಡಿದರು.
ಕಲಬುರಗಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದಿನವಾದ ಬುಧವಾರ ನಡೆದ ಗೋಷ್ಠಿಯ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಇಂದು ತಂತ್ರಾಂಶದ ಬೆಂಬಲ ಇಲ್ಲದ ಭಾಷೆ ಅವನತಿಯತ್ತ ಸಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದರು.
ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ಅವರ ಬಳಿ ತಾವು ಮತ್ತು ಪೂರ್ಣಚಂದ್ರ ತೇಜಸ್ವಿ ಹೋಗಿ, ಕನ್ನಡ ತಂತ್ರಾಂಶಕ್ಕೆ ನೆರವು ನೀಡಬೇಕೆಂದು ಕೇಳಿದ್ದೆವು. ತಕ್ಷಣ ಅವರು ಎರಡು ಕೋಟಿ ರೂ. ಘೋಷಿಸಿದ್ದರು. ಅದರ ಪರಿಣಾಮ ಇಂದು ನಾವೆಲ್ಲ ಮೊಬೈಲ್ ನಲ್ಲಿ ಕನ್ನಡ ಬಳಸಲು ಸಾಧ್ಯವಾಗಿದೆ. ಇದೀಗ ಅವರು ಇನ್ನಷ್ಟು ನೆರವು ನೀಡಲಿ ಎಂದು ಆಶಿಸಿದರು. ಕಂಬಾರರ ಮಾತು ಕಿವಿಗೊಟ್ಟು ಆಲಿಸಿದ ಸಿಎಂ, ಈ ಕೋರಿಕೆ ಬರುತ್ತಿದ್ದಂತೆ ಕೈಮುಗಿದು ಸಹಮತ ವ್ಯಕ್ತಪಡಿಸಿದರು.
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಯಂಥ ಜ್ಞಾನ ವಾಹಿನಿಗಳು ಕನ್ನಡದಲ್ಲೂ ತರ್ಜುಮೆಯಾಗಿ ಲಭ್ಯವಾಗಬೇಕು. ತಮಿಳು, ತೆಲುಗಿನಲ್ಲಿ ಈ ಅವಕಾಶವಿದೆ. ಕನ್ನಡಿಗರಿಗೆ ಅವಕಾಶ ಸಿಗಬೇಕಾಗಿದ್ದು, ಸಚಿವ ಸಿ.ಟಿ.ರವಿ ಈ ಬಗ್ಗೆ ಪ್ರಯತ್ನ ಮಾಡಬೇಕೆಂದು ಕಂಬಾರರು ಸಲಹೆ ನೀಡಿದರು.