ನವದೆಹಲಿ: ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಖಾಸಗಿ ಹಕ್ಕಿನ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿವೆ ಎಂಬ ಆರೋಪಗಳ ನಡುವೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್, ಭಯೋತ್ಪಾದಕರು ಹಾಗೂ ಭ್ರಷ್ಟಾಚಾರಿಗಳ ಖಾಸಗಿತನದ ಹಕ್ಕು ರಕ್ಷಣೆ ಸಾಧ್ಯವಿಲ್ಲ ಎಂದು ಶನಿವಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ತಾವು ಸಾಮಾಜಿಕ ಮಾಧ್ಯಮದ ಪ್ರಬಲ ಬೆಂಬಲಿಗ ಆದರೆ, ಕೆಲವರು ತಮ್ಮಸ್ವಾರ್ಥ ಸಾಧನೆಗೆ ಅದನ್ನು ದುರುಪಯೋಗಪಡಿಸಿಕೊಂಡಾಗ ತೀವ್ರ ಬೇಸರಗೊಂಡಿದ್ದೇನೆ ಎಂದರು. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುವ ಪ್ರವೃತ್ತಿ ಹೆಚ್ಚುತ್ತಿರುವುದು "ಅಪಾಯಕಾರಿ" ಬೆಳವಣಿಗೆ ಎಂದು ಬಣ್ಣಿಸಿದರು. ಈ ವಿಷಯದಲ್ಲಿ ನ್ಯಾಯಮೂರ್ತಿಗಳು ಸೂಕ್ತ ನಿರ್ಧಾರ ಕೈಗೊಳ್ಳಲು ಸಂಪೂರ್ಣ ಸ್ವತಂತ್ರರು ಎಂದು ಕಾನೂನು ಸಚಿವರು ಹೇಳಿದರು.