ಬದಿಯಡ್ಕ: ದೇವಾಲಯಗಳು ಅನುದಿನವೂ ವಿಶ್ವಶಾಂತಿಗಾಗಿ ಪ್ರಾರ್ಥಿಸುವ ಶ್ರದ್ಧಾಕೇಂದ್ರಗಳಾಗಿವೆ. ದೇಶದ ಯಾವುದೇ ಮೂಲೆಯಲ್ಲಾದರೂ ಸತ್ಕಾರ್ಯಗಳು ನಡೆದರೆ ಅದರ ಪ್ರಭಾವ ಇಡೀ ಪ್ರಪಂಚಕ್ಕೇ ವ್ಯಾಪಿಸುತ್ತದೆ. ನಮ್ಮ ಹಿಂದೂ ಸಂಸ್ಕøತಿ, ವಿಶ್ವಾಸ, ನಂಬಿಕೆಗಳಿಂದ ಶಾಂತಿ ನೆಮ್ಮದಿ ಉಂಟಾಗುತ್ತದೆ ಎಂದು ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿದರು.
ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಪೂಜೆ, ಹೋಮ ಹವನಾದಿಗಳನ್ನು ಮಾಡಿದಾಗ ಸರ್ವೇ ಜನಾಃ ಸುಖಿನೋ ಭವಂತು ಎಂದು ನಾವು ಪ್ರಾರ್ಥಿಸುತ್ತೇವೆ. ನನಗೆ ಮಾತ್ರ ಒಳಿತಾಗಲಿ ಎಂಬ ಸಂಕುಚಿತ ಮನೋಭಾವ ಹಿಂದೂ ಧರ್ಮದಲ್ಲಿ ಇಲ್ಲ. ವಿಶ್ವಕ್ಕೆ ಒಳಿತನ್ನು ಮಾಡು ಎಂಬ ಭಾವನೆ ನಮ್ಮದಾಗಿದೆ. ಮಹಿಷಮರ್ದಿನಿಯ ಈ ಪವಿತ್ರವಾದ ಕ್ಷೇತ್ರದಲ್ಲಿ ಕಾರ್ಯಕರ್ತರ ಹಲವು ಸಮಯದ ಪ್ರಭಾವೀ ಕೆಲಸಗಳು ನಡೆದಿದೆ. ಎಲ್ಲರ ದುಡಿಮೆಯ ಫಲರೂಪವಾಗಿ ಈ ಉತ್ಸವವು ಶುಭಪ್ರದವಾಗಿ ಮೂಡಿಬಂದಿದೆ. ನಮ್ಮತನವನ್ನು ಮರೆತು, ಎಲ್ಲಸಂಕಷ್ಟಗಳನ್ನು ಬದಿಗೊತ್ತಿದ ಆನಂದದ ಅನುಭವ ಇಲ್ಲಿ ಆಗಿದೆ. ಒತ್ತಡಗಳನ್ನು ಬದಿಗಿರಿಸಿ ದೇವಿಯ ಸನ್ನಿಧಿಯಲ್ಲಿ ಆರಾಧನೆಯ ಮೂಲಕ ಜೀವನ ಸಾರ್ಥಕ್ಯಕ್ಕೆ ಪ್ರಯತ್ನಿಸಿದರೆ ಇಂದು ಕೈಗೊಂಡ ಕಾರ್ಯವು ಸಾರ್ಥಕವಾಗುತ್ತದೆ ಎಂದರು.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಾವು ಕೈಗೊಂಡ ಕಾರ್ಯವು ಯಶಸ್ವಿಯಾಗಿ ನಡೆಯಬೇಕಿದ್ದರೆ ದೇವರ ಅನುಗ್ರಹವಿರಬೇಕು.
ಪ್ರಬಲವಾಗಿರುವ ಹಿಂದೂ ಧರ್ಮವನ್ನು ನಾಶಮಾಡಲು ಹಿಂದೆಯೂ ಅನೇಕರು ಪ್ರಯತ್ನ ಪಟ್ಟಿದ್ದರೂ ಅದು ನಡೆಯಲಿಲ್ಲ. ಇನ್ನು ಮುಂದೆಯೂ ನಡೆಯದು. ದೇವಿ ಮಹಿಷಮರ್ದಿನಿಯ ಅನುಗ್ರಹ ಇಲ್ಲಿ ಆಗಿದೆ ಎನ್ನುವುದು ಇಲ್ಲಿನ ಪರಿಸರವು ತಿಳಿಸುತ್ತದೆ ಎಂದರು.
ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಮಾಡಿದರು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ, ಕೇಶವ ಅಡಿಗ ಕುಂಬಳೆ, ಮವ್ವಾರು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಪುರುಷೋತ್ತಮ ಭಟ್ ಮವ್ವಾರು, ಅರವಿಂದ ಕುಮಾರ್ ಅಲೆವೂರಾಯ ನೇರೆಪ್ಪಾಡಿ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ, ಪೊಡಿಪ್ಪಳ್ಳ ಶ್ರೀ ಭಗವತೀ ಕ್ಷೇತ್ರದ ಅಂಬಾಡಿ ಕಾರ್ನವರ್ ಗೌರವ ಉಪಸ್ಥಿತರಿದ್ದರು. ಮುಂಡೋಳು ಕ್ಷೇತ್ರದ ಆಡಳಿತ ಮೊಕ್ತೇಸರ ರಘುರಾಮ ಬಲ್ಲಾಳ್ ಎ.ಬಿ., ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಉದ್ಯಮಿ ರಾಮಪ್ರಸಾದ್ ಕಾಸರಗೋಡು, ವಿಶ್ವಹಿಂದೂಪರಿಷತ್‍ನ ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಎಸ್.ಎನ್.ಮಯ್ಯ ಬದಿಯಡ್ಕ, ಡಾ. ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಐತ್ತಪ್ಪ ಮವ್ವಾರು, ನೋಟರಿ ಪುರುಷೋತ್ತಮ ಭಟ್ ಮಂಗಳೂರು, ಗ್ರಾಪಂ ಸದಸ್ಯ ಶಶಿಧರ ತೆಕ್ಕೆಮೂಲೆ, ಎಂ.ಸುಧಾಮ ಗೋಸಾಡ, ಜನಾರ್ದನ ಸಿ.ಎಸ್.ಮವ್ವಾರು, ಸುಧಾಕರ ಮಣಿಯಾಣಿ ಪಾಂಡಿಗದ್ದೆ ಉಪಸ್ಥಿತರಿದ್ದು ಶುಭಕೋರಿದರು. ನಾರಾಯಣ ಮೇಸ್ತ್ರಿ ಪಯ್ಯನ್ನೂರು ಹಾಗೂ ಉದಯ ಆಚಾರ್ಯ ಪಯ್ಯನ್ನೂರು ಅವರನ್ನು ಗೌರವಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಡಾ. ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು. ಗಂಗಾಧರ ರೈ ಮಠದಮೂಲೆ ನಿರೂಪಿಸಿದರು. ರಾತ್ರಿ 10 ಗಂಟೆಯಿಂದ ಮೂಲ್ಕಿ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಾಗನಂದಿನಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.