ಮುಂಬೈ:ಏರ್ ಇಂಡಿಯಾ ಸಂಸ್ಥೆ ಮುಚ್ಚುತ್ತದೆ ಎಂಬ ವದಂತಿ ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ(ಸಿಎಂಡಿ) ಅಶ್ವನಿ ಲೊಹನಿ ಹೇಳಿದ್ದಾರೆ.
ಏರ್ ಇಂಡಿಯಾ ಉದ್ಯೋಗಿಗಳು ಈ ವದಂತಿಗಳಿಗೆ ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಏರ್ ಇಂಡಿಯಾ ಖಾಸಗೀಕರಣವಾಗುತ್ತಿದೆ ಎಂಬ ವದಂತಿ ಶುದ್ಧ ಸುಳ್ಳು. ಅದು ತನ್ನ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಲೊಹನಿ ಸುದ್ದಿಗಾರರಿಗೆ ತಿಳಿಸಿದರು. ಅವರು ನಿನ್ನೆ ಮುಂಬೈಯಲ್ಲಿ ಏರ್ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಏರ್ ಇಂಡಿಯಾ ಇನ್ನು ಕೂಡ ಭಾರತದಲ್ಲಿ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಉಳಿದುಕೊಂಡಿದೆ. ಅದು ಯಾವಾಗಲೂ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಚೀನಾದ ವುಹಾನ್ ನಿಂದ ಭಾರತೀಯರನ್ನು ಕರೆತಂದಿದ್ದೆವು. ಬೇರೆ ಕಡೆಗಳಿಂದಲೂ ಸಹ ಭಾರತೀಯರನ್ನು ವಿಮಾನದಲ್ಲಿ ಸ್ಥಳಾಂತರ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದರು. ವಿಮಾನಯಾನ ಸಂಸ್ಥೆಯ ಉದ್ದೇಶಿತ ಹೂಡಿಕೆ ಹಿಂತೆಗೆತಕ್ಕೆ ಮೊದಲು ಏರ್ ಇಂಡಿಯಾ ಉದ್ಯೋಗಿಗಳಿಗೆ ಎಲ್ಲಾ ಬಾಕಿ ವೇತನವನ್ನು ನೀಡಲಾಗುವುದು ಎಂದು ಈ ಹಿಂದೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಏರ್ ಇಂಡಿಯಾವನ್ನು ಸರ್ಕಾರ ಖಾಸಗಿ ಕಂಪೆನಿಗೆ ಮಾರಾಟ ಮಾಡುತ್ತದೆ ಎಂದು ಹೇಳಿದ್ದರು. ಏರ್ ಇಂಡಿಯಾ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ಏರ್ ಇಂಡಿಯಾ ಸ್ಯಾಟ್ಸ್ ಏರ್ ಪೆÇೀರ್ಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ನಿಂದ ತನ್ನ ಪಾಲಿನ ಷೇರನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಾಥಮಿಕ ಬಿಡ್ ನ್ನು ಇತ್ತೀಚೆಗೆ ಕರೆದಿತ್ತು.
ಕಳೆದ ಜನವರಿ 2ರಂದು ಏರ್ ಇಂಡಿಯಾ ಸಂಸ್ಥೆಯ ನೌಕರರ ಒಕ್ಕೂಟ ಪ್ರತಿನಿಧಿಗಳು ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಖಾಸಗೀಕರಣ ಮಾಡುವ ಬಗ್ಗೆ ತಮ್ಮ ಆತಂಕವನ್ನು ತೋಡಿಕೊಂಡಿದ್ದರು. ಸಂಸ್ಥೆ ನಷ್ಟದಲ್ಲಿರುವುದರಿಂದ ಖಾಸಗೀಕರಣ ಮಾಡುವುದು ಅನಿವಾರ್ಯ ಎಂದು ಸರ್ಕಾರ ಹೇಳಿದೆ.