ಕಾಸರಗೋಡು: ಪತ್ರಕರ್ತರು ನಡೆಸುವ ವಿಮರ್ಶೆ ಆರೋಗ್ಯಪೂರ್ಣವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದರು.
ಅವರು ಕಾಸರಗೋಡು ಜಿಲ್ಲಾ ವಾರ್ತಾಮತ್ತು ಮಾಹಿತಿ ಇಲಾಖೆ ವತಿಯಿಂದ ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಧ್ಯಮ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಅಧಿಕಾರಿ ಹಾಗೂ ಆಡಳಿತವನ್ನು ನಿರಂತರ ಪ್ರಶ್ನಿಸುವುದರಿಂದ ಜಾಗೃತಿ ನೆಲೆಗೊಳ್ಳಲು ಕಾರಣವಾಗುತ್ತಿದೆ. ಅಭಿವೃದ್ಧಿಪರ ಸುದ್ದಿಗಳಿಗೆ ಇಂದು ಮಾಧ್ಯಮಗಳಲ್ಲಿ ಜಾಗ ಕಡಿಮೆಯಾಗುತ್ತಿದೆ. ತಮ್ಮದೇ ಆದ ಅಜೆಂಡ ಇರಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರಲು ಯತ್ನಿಸುವುದು ಅಸಾಧ್ಯದ ಕೆಲಸವಾಗಲಿದೆ. ಕೃಷಿಪರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಧ್ರುವೀಕರಣ ತಂದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಮಾಹಿತಿ ಇಲಾಖೆ ಕಣ್ಣೂರು ವಲಯ ನಿರ್ದೇಶಕ ಕೆ.ಪಿ ಅಬ್ದುಲ್ ಖಾದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಗಳೂರು ವಾರ್ತಾ ಮತ್ತು ಮಾಹಿತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಪತ್ರಕರ್ತರಾದ ಜಿನೇಶ್ ಕುಮರ್ ಎರಮಂ ಅವರು 'ಮಾಧ್ಯಮ ಭಾಷೆ', ಜಯಕೃಷ್ಣನ್ ನರಿಕುಟ್ಟಿ ಅವರು ಎಡಿಟಿಂಗ್ ಎಂಬ ವಿಷಯದ ಬಗ್ಗೆ ತರಗತಿ ನಡೆಸಿದರು. ಕಞಂಗಾಡ್ ಪ್ರೆಸ್ ಫಾರಂ ಅಧ್ಯಕ್ಷ ಇ.ಪಿ ಜಯಕೃಷ್ಣನ್, ಕಾರ್ಯದರ್ಶಿ ಟಿ.ಕೆ ನಾರಾಯಣನ್ ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಮಧುಸೂಧನನ್ ಸ್ವಾಗತಿಸಿದರು. ಅಸಿಸ್ಟೆಂಟ್ ಎಡಿಟರ್ ಪಿ.ರಶೀದ್ ಬಾಬು ವಂದಿಸಿದರು.