ಕಾಸರಗೋಡು: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕಾಸರಗೋಡು ಜಿಲ್ಲಾ ಪಂಚಾಯಿತಿ ಗೊತ್ತುವಳಿ ಮಂಡನೆಗೆ ರಾಜ್ಯ ಹೈಕೋರ್ಟು ನೀಡಿದ್ದ ತಡೆಯಾಜ್ಞೆಯನ್ನು ಮತ್ತೆ ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. ಕಾಸರಗೊಡು ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಅವರು ಕಾಸರಗೋಡು ಜಿಲ್ಲಾ ಪಂಚಾಯಿತಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಗೊತ್ತುವಳಿ ಮಂಡಿಸುವುದರ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದಕ್ಕೆ ತಡೆಯಾಜ್ಞೆ ವಿಧಿಸಲಾಗಿತ್ತು. ತಡೆಯಾಜ್ಞೆ ಸೋಮವಾರಕ್ಕೆ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಅರ್ಜಿ ಪರಿಶೋಧನೆ ಸಂದರ್ಭ ನ್ಯಾಯಾಲಯ ಮತ್ತೆ ತಡೆಯಾಜ್ಞೆ ಕಾಲಾವಧಿ ವಿಸ್ತರಿಸಿ ನೀಡಿದೆ.
ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಜನತೆಯ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆಯಲ್ಲೂ ಗೊತ್ತುವಳಿ ಮಂಡಿಸಲಾಗಿದ್ದು, ಇದಕ್ಕೆ ರಾಜ್ಯಪಾಲರೂ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು. ವಿಧಾನಸಭೆಯಲ್ಲಿ ಗೊತ್ತುವಳಿ ಮಂಡನೆಯಾಗುತ್ತಿದ್ದಂತೆ ಕಾಸರಗೋಡು ಜಿಲ್ಲಾ ಪಂಚಾಯಿತಿಯೂ ಗೊತ್ತುವಳಿ ಮಂಡನೆಗೆ ತಯಾರಿ ನಡೆಸುತ್ತಿದ್ದಂತೆ, ಕೆ. ಶ್ರೀಕಾಂತ್ ನ್ಯಾಯಾಲಯದ ಮೆಟ್ಟಿಲೇರಿದ್ದರು.