ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಗಣಯಾಗ, ಅಧಿವಾಸ ಹೋಮ ಕಲಶಾಭಿಷೇಕ ಮತ್ತು ಚಂಡಿಕಾ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರವರ ಆಚಾರ್ಯತ್ವದಲ್ಲಿ ನಡೆಯಿತು. ನಂತರ ಪರಮಪೂಜ್ಯ ಯತಿದ್ವಯರ, ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣ ರವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಮೋನಪ್ಪ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ದೀಪ ಪ್ರಜ್ವಾಲನೆಗೈದು, ಯತಿದ್ವಯರ ನೇತೃತ್ವದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕೃಷ್ಣೈಕ್ಯ ಪೂಜ್ಯ ಪೇಜಾವರ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ರವರು ಸಂಸ್ಮರಣಾ ನುಡಿಗಳನ್ನಾಡಿ ಮಾತೃಹೃದಯೀ ಸಂತರಾದ ಪೇಜಾವರ ಶ್ರೀಪಾದರು ಹಿಂದು ಧರ್ಮ ಸಂರಕ್ಷಣೆಗೆ ಅವತರಿಸಿದ ವಾಮನಮೂರ್ತಿ,ಅವರಂದಂತೆ ದೀನ ದಲಿತರ ಸೇವೆಯೇ ನಾವು ಭಗವಂತನಿಗೆ ಸಲ್ಲಿಸುವ ಕರ ಎಂದು ಸಂಸ್ಮರಣೆಗೈದರು.
ಪೂಜ್ಯ ಆಸ್ರಣ್ಣದ್ವಯರು ಕರ್ಮಸಿದ್ಧಾಂತ, ಜಾÐನಸಿದ್ಧಾಂತವನ್ನು ಸೇರಿಸಿ ನಡೆಯುವ ಕೊಂಡೆವೂರು ಕ್ಷೇತ್ರದ ಮಹತ್ವದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರ ಶಾಸಕ ಡಾ. ವೈ..ಭರತ್ ಶೆಟ್ಟಿ, ಅದಾನಿ ಗ್ರೂಪಿನ ಕಿಶೋರ್ ಆಳ್ವ, ಚಿತ್ತರಂಜನ್ ಗರೋಡಿ, ಈರೋಡ್ ರಾಜನ್ ಕೋಝಿಕ್ಕೋಡು, ಬಿಂದುದಾಸ್, ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಮತ್ತು ಆಶೋಕ್ ಕೋಟ್ಯಾನ್ ಮುಂಬಯಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ವೈದ್ಯರೂ, ಸಾಮಾಜಿಕ ಧಾರ್ಮಿಕ ಸಂಘಟಕರೂ ಆದ ಡಾ. ಶ್ರೀಧರ ಭಟ್ ಉಪ್ಪಳ ದಂಪತಿಗಳನ್ನು ಯತಿದ್ವಯರು, ಪೂಜ್ಯ ಆಸ್ರಣ್ಣದ್ವಯರು ಮತ್ತು ಅತಿಥಿಗಳು ಶಾಲುಹೊದಿಸಿ ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಹಾರಾರ್ಪಣೆಗೈದು ಸನ್ಮಾನಿಸಿದರು. ಬಳಿಕ ಪರಿಸರದ ಸಂಘಸಂಸ್ಥೆ, ಧಾರ್ಮಿಕ ಕೇಂದ್ರಗಳ ಪ್ರಮುಖರು ಗೌರವಾರ್ಪಣೆಗೈದರು.
ಪೂಜ್ಯ ಮಾಣಿಲ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ರಾಷ್ಟ್ರ ಬೆಳೆಯಲು ನಮ್ಮ ಆಚರಣೆಗಳು ಉಳಿಯಬೇಕು ಎಂದರು. ಪೂಜ್ಯ ಕೊಂಡೆವೂರು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸಮಸ್ತರ ಬೆಂಬಲದಿಂದ ಸವಾಲುಗಳನ್ನೆದುರಿಸಿ ಮಠ ಬೆಳೆಯುತ್ತಿದೆ, ಅಳಿಯುತ್ತಿರುವ ಕಾಸರಗೋಡು ತಳಿಯ ಗೋಸಂರಕ್ಷಣೆಗಾಗಿ ಸಮಸ್ತ ಸಮಾಜ ಕೈ ಜೋಡಿಸಿದರೆ ಈ ಮಹಾನ್ ಕಾರ್ಯದಲ್ಲಿ ಶ್ರೀಮಠ ದಿಟ್ಟ ಹೆಜ್ಜೆಯನ್ನಿಟ್ಟು ಪವಿತ್ರ ಗೋಮಾತೆ ಸೇವೆ, ಸಂರಕ್ಷಣೆಯಲ್ಲಿ ಮುನ್ನಡೆಯಲಿದೆ ಎಂದರು.
ನಂದಕಿಶೋರ್ ಪ್ರಾರ್ಥನೆಗೈದ ಕಾರ್ಯಕ್ರಮದಲಲಿ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ದಿನಕರ ಹೊಸಂಗಡಿಯವರು ಸನ್ಮಾನ ಪತ್ರ ವಾಚಿಸಿದರು. ಅಶೋಕ ಬಾಡೂರು ವಂದಿಸಿದರು. ಹರೀಶ್ ಮಾಡ ನಿರೂಪಿಸಿದರು.