ಕಾಸರಗೋಡು: ಕೇರಳ ಲೋಕಸೇವಾ ಆಯೋಗ ಕಳೆದ ಆಕ್ಟೋಬರ್ 22 ರಂದು ನಡೆಸಿದ ಕನ್ನಡ ಮಲಯಾಳ ಬಲ್ಲ ಎಲ್ ಡಿ ಕ್ಲರ್ಕ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಪ್ರಶ್ನೆಗಳನ್ನೇ ಹೆಚ್ಚು ನೀಡಿದ್ದು ಕನ್ನಡ ಉದ್ಯೋಗಾರ್ಥಿಗಳು ವಂಚನೆಗೆ ಒಳಗಾಗಿದ್ದರು.ಈ ಬಗ್ಗೆ ನೀಡಿದ ದಾವೆಯ ಪರವಾಗಿ ನ್ಯಾಯಾಲಯ ಧ್ವನಿಯೆತ್ತಿದ್ದು ಅನ್ಯಾಯವನ್ನು ಬೊಟ್ಟುಮಾಡಿ ತೋರಿಸಿದೆ.
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಬೆಂಬಲದೊಂದಿಗೆ ಉದ್ಯೋಗಾರ್ಥಿಗಳ ಹೋರಾಟ ಸಮಿತಿಯನ್ನು ರೂಪೀಕರಿಸಿತ್ತು. ಈ ಹೋರಾಟ ಸಮಿತಿಯ ಪರವಾಗಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮತ್ತು ಕಾರ್ಯದರ್ಶಿ ವಿಷ್ಣು ಪ್ರಕಾಶ ಮುಳ್ಳೇರಿಯ ಅವರು ಕೇರಳ ಹೈಕೋರ್ಟನಲ್ಲಿ ದಾವೆ ಹೂಡಿದ್ದರು.
ಕನ್ನಡ ಉದ್ಯೋಗಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದ್ದು, ಮೊದಲೇ ತಿಳಿಸಿದ ವಿಜ್ಞಾಪನೆಯ ಪ್ರಕಾರ ಪರೀಕ್ಷೆ ನಡೆಸದ ಕೇರಳ ಪಿಎಸ್‍ಸಿಯ ನಡೆ ದುರುದ್ದೇಶದಿಂದ ಕೂಡಿದ್ದು ಎಂಬುದಾಗಿ ಕೋರ್ಟಗೆ ಮನವರಿಕೆಯಾಗಿದ್ದು ಕಳೆದ ಜ.15 ರಂದು ಅಂತಿಮ ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ ಇದೀಗಾಗಲೇ ನಡೆದ ಒಎಮ್‍ಆರ್ ಪರೀಕ್ಷೆಯ ಅಂಕದಲ್ಲಿ ಯಾವುದೇ ಕಟ್ ಆಫ್ ಇರುವುದಿಲ್ಲ. ಪ್ರಾಥಮಿಕ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ ಮುಂದೆ ನಡೆಯಲಿರುವ ಲಿಖಿತ ಪರೀಕ್ಷೆಯನ್ನು ಬರೆಯುವ ಆರ್ಹತೆ ಇದೆ.
ಈ ಆದೇಶವು ಕನ್ನಡ ಉದ್ಯೋಗಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ. ಮಾತ್ರವಲ್ಲ ಕನ್ನಡಿಗರ ಬೇಡಿಕೆಗಳನ್ನು ಸತತವಾಗಿ ತಿರಸ್ಕರಿಸುವ ಕೇರಳ ಪಿಎಸ್‍ಸಿಗೆ ಕೋರ್ಟ್ ನೀಡಿದ ಹೊಡೆತವಾಗಿದೆ. ದಾವೆ ಹೂಡಲು ಮತ್ತುಉದ್ಯೋಗಾರ್ಥಿಗಳಿಗೆ ಬೇಕಾದ ಎಲ್ಲಾ ಸಹಾಯ ಒದಗಿಸಿದ ಕಾಸರಗೋಡು ಹೋರಾಟ ಸಮಿತಿಯ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಮತ್ತು ಪದಾಧಿಕಾರಿಗಳಿಗೆ, ಕನ್ನಡ ಅಧ್ಯಾಪಕ ಮತ್ತು ವಿದ್ಯಾರ್ಥಿ ಸಂಘಗಳಿಗೆ, ತನು ಮನ ಧನ ಮೂಲಕ ಸಹಾಯ ಮಾಡಿದ ಎಲ್ಲಾ ಕನ್ನಡಿಗರಿಗೆ, ಅದೇ ರೀತಿ ಉದ್ಯೋಗಾರ್ಥಿಗಳ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದೆ.
ಮುಂದಿನ ದಿನಗಳಲ್ಲಿ ಕನ್ನಡ ಉದ್ಯೋಗಾರ್ಥಿಗಳಿಗೆ ಅನ್ಯಾಯವಾದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.