ಬದಿಯಡ್ಕ: ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೊಡಮಾಡುವ 2020ನೇ ಸಾಲಿನ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಗ್ರಾಮೀಣ ಕನ್ನಡ ಮಾಧ್ಯಮ ಶಾಲಾ ಪ್ರಶಸ್ತಿಯು ಪೆರಡಾಲದ ನವಜೀವನ ಹಿರಿಯ ಪ್ರಾಥಮಿಕ ಶಾಲೆಗೆ ಲಭಿಸಿರುವುದರೊಂದಿಗೆ ಗಡಿನಾಡಿನ ಕೀರ್ತಿಗೆ ಹೊಸ ಗರಿ ಸೇರಿಕೊಂಡಿದೆ.
ಪ್ರಶಸ್ತಿ ಪತ್ರದೊಂದಿಗೆ ಮೂರು ಲಕ್ಷ ರೂಪಾಯಿ ನಗದು ಬಹುಮಾನವಿದೆ. ಎಲ್ಲ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿರುವ ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸುವ ಉದ್ದೇಶದಿಂದ 2016ರಲ್ಲಿ ಡಾ.ನಿಟ್ಟೆಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. 10ನೇ ತರಗತಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ, ಸಾಂಸ್ಕøತಿಕ ಮತ್ತು ಇತರ ಪಠ್ಯೇತರ ಚಟುವಟಿಕೆಗಳು ಮತ್ತು ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಂಡ ಹೊಸತನವನ್ನು ಪರಿಗಣಿಸಲಾಗುತ್ತಿದೆ. 2019-20ರ ಸಾಲಿನ ಪ್ರಶಸ್ತಿ ಆಯ್ಕೆಗಾಗಿ ದಕ್ಷಿಣ ಕನ್ನಡ ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಅರ್ಹ ಶಾಲೆಗಳಿಗೆ ತೆರಳಿ ಮೌಲ್ಯ ಮಾಪನ ಮಾಡಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆ ಪ್ರಶಸ್ತಿ ಸಮಿತಿ ನೇತೃತ್ವ ವಹಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭ :
ಮಾ.3ರಂದು ಬೆಳಗ್ಗೆ 11 ಗಂಟೆಗೆ ದೇರಳೆಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದ್ದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‍ನ ಪ್ರೊ. ಚಾನ್ಸೆಲರ್ ಡಾ. ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ.ಎಂ. ಶಾಂತಾರಾಮ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಶಾಲಾ ವ್ಯವಸ್ಥಾಪಕ ಮಂಡಳಿ, ಅಧ್ಯಾಪಕರು, ವಿದ್ಯಾರ್ಥಿಗಳು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.