ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಿವೆಂಟಿವ್ ಮೆಡಿಸಿನ್ ಅಸೋಸಿಯೇಟ್ ಪ್ರೊಫೆಸರ್ ಬಿ.ಲೈಲಾ ನೇತೃತ್ವದ ತಂಡದಲ್ಲಿ ಶ್ವಾಸಕೋಶ ತಜ್ಞ, ಜನರಲ್ ಮೆಡಿಸಿನ್ ವಿಭಾಗದ ವೈದ್ಯ, ಇ.ಎನ್.ಟಿ ಸರ್ಜನ್, ನ್ಯೂರೊಲೊಜಿಸ್ಟ್ ವಿಭಾಗದ ತಜ್ಞ ವೈದ್ಯರಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಮೆಡಿಕಲ್ ಬೋರ್ಡ್‍ಗೆ ರೂಪುನೀಡಲಾಗಿದ್ದು, ತಂಡ ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ಪಿ ದಿನೇಶ್ ಕುಮಾರ್ ಅವರಿಂದ ಮಾಹಿತಿ ಸಂಗ್ರಹಿಸಿತು. ಮೂರು ದಿವಸಗಳ ಕಾಲ ತಂಡ ಜಿಲ್ಲೆಯಲ್ಲಿ ಉಳಿದುಕೊಳ್ಳಲಿದ್ದು, ಅಗತ್ಯಬಿದ್ದಲ್ಲಿ, ತಪಾಸಣೆ ದಿನಾಂಕ ವಿಸ್ತರಿಸಿ, ಕರೊನಾ ವೈರಸ್‍ಬಾಧಿತರಿಗೆ ಚಿಕಿತ್ಸೆಗೆ ನೆರವಾಗುವುದಾಗಿ ತಂಡದ ಮುಖ್ಯಸ್ಥೆ ಡಾ. ಲೈಲಾ ತಿಳಿಸಿದ್ದಾರೆ. ಚೀನಾದಿಂದ ಆಗಮಿಸಿ ಅವರ ಮನೆಗಳಲ್ಲಿ ಉಳಿದುಕೊಂಡಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದ್ದು, ಇಂತಹ ಕೆಲವು ಮನೆಗಳಿಗೆ ತಂಡ ಭೇಟಿ ನೀಡಿತು. ಚೀನಾದಿಂದ ಆಗಮಿಸಿರುವ 92ಮಂದಿ ಹಾಗೂ ಇತರ ರಾಜ್ಯಗಳ ನಾಲ್ಕು ಮಂದಿ ಸಹಿತ 96ಮಂದಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ನಿಗಾದಲ್ಲಿದ್ದಾರೆ. ಇವರಲ್ಲಿ ತಲಾ ಇಬ್ಬರು ಕಾಞಂಗಾಡು ಜಿಲ್ಲಾಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿದ್ದರೆ, ಉಳಿದ 92ಮಂದಿ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.