ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಜನಪರ ಒಕ್ಕೂ ಟವತಿಯಿಂದ ಮಾರ್ಚ್ 25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಎಂಡೋಸಂತ್ರಸ್ತ ಅನಿರ್ಧಿಷ್ಟಾವಧಿ ಮುಷ್ಕರ ನಡೆಯಲಿದೆ. ಸರ್ಕಾರ ಎಂಡೋ ಸಂತ್ರಸ್ತರಿಗೆ ಇದುವರೆಗೆ ನೀಡಿರುವ ಭರವಸೆಗಳನ್ನು ಈಡೇರಿಸದಿರುವುದನ್ನು ಪ್ರತಿಭಟಿಸಿ ಮುಷ್ಕರ ನಡೆಯಲಿದೆ.
2019 ಜನವರಿ ತಿಂಗಳಲ್ಲಿ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಎಂಡೋ ಸಂತ್ರಸ್ತರ ತಾಐಂದಿರು ವಿವಿಧ ಬೇಡಿಕೆ ಮುಂದಿರಿಸಿ ನಡೆಸಿದ ನಿರಾಹಾರ ಮುಷ್ಕರದ ಸಂದರ್ಭ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತ್ರಸ್ತರ ಒಕ್ಕೂಟಕ್ಕೆ ನೀಡಿದ್ದ ಭರವಸೆಯ ಹಿನ್ನೆಲಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿತ್ತು. ಆದರೆ ಸರ್ಕಾರ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ರಂಗಕ್ಕಿಳಿಯಲು ತೀರ್ಮಾನಿಸಲಾಗಿದೆ.
2017ರಲ್ಲಿ ನಡೆಸಲಾದ ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ 1905ಮಂದಿ ಸಂತ್ರಸ್ತರ ಪೈಕಿ ಸೇರ್ಪಡೆಗೆ ಬಾಕಿಯಿರುವ 1542ಮಂದಿಯಲ್ಲಿ 18ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಇನ್ನೊಂದು ತಪಾಸಣೆ ನಡೆಸದೇ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸಬೇಕು, 18ವರ್ಷಕ್ಕಿಂತ ಮೇಲಿನವರ ವೈದ್ಯಕೀಯ ದಾಖಲೆ ತಪಾಸಣೆ ನಡೆಸಿ, ಅರ್ಹತೆ ಇರುವವರನ್ನು ಸೇರಿಸಲು ಕೈಗೊಂಡ ತೀರ್ಮಾನ ಇದುವರೆಗೆ ಈಡೇರಿಸಿಲ್ಲ. ಅಲ್ಲದೆ ಪ್ರತ್ಯೇಕ ವೈದ್ಯಕೀಯ ಶಿಬಿರವನ್ನೂ ನಡೆಸಲಾಗಿಲ್ಲ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.