ಕಾಸರಗೋಡು: ಚೈನಾದ ವುವಾನ್‍ನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದ ಕಾಞಂಗಾಡು ಪರಿಸರದ ಎಂಬಿಬಿಎಸ್ ವಿದ್ಯಾರ್ಥಿಗೆ ಕೊರೊನಾ ವೈರಸ್ ಬಾಧಿತರಾಗಿ ಚಿಕಿತ್ಸೆಯಲ್ಲಿದ್ದಾರೆ. ಕಾಞಂಗಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಗಿದ್ದು, ಆರೋಗ್ಯ ಸ್ಥಿತಿ ತೃಪ್ತಿಕರ ಎಂಬುದಾಗಿ ಆರೋಗ್ಯ ಇಲಾಖೆ ಅಧಿಕೃತರು ತಿಳಿಸಿದ್ದಾರೆ.
ಈ ಹಿಂದೆ ಕೇರಳದ ತ್ರಿಶ್ಯೂರು ಹಾಗೂ ಆಲಪ್ಪುಳ ಜಿಲ್ಲೆಯಲ್ಲಿ ಕೊರೊನಾ ಬಾಧಿತ ವಿದ್ಯಾರ್ಥಿಗಳು ಸಹಪಾಠಿಯಾಗಿದ್ದರು ಎಂದು ತಿಳಿದು ಬಂದಿದೆ. ಕಳೆದ ಶುಕ್ರವಾರ ಆಸ್ಪತ್ರೆಗೆ ಆಗಮಿಸಿ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೊಳಗಾಗಿದ್ದರು. ಇವರ ಸಹಿತ ಮೂವರನ್ನು ಪ್ರತ್ಯೇಕ ನಿಗಾವಹಿಸಿ ರಕ್ತ ಮಾದರಿಯನ್ನು ಉನ್ನತ ತಪಾಸಣೆಗಾಗಿ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ. ಚೈನಾದಿಂದ ಆಗಮಿಸಿದ ಕೆಲವರು ಆರೋಗ್ಯ ಇಲಾಖೆಯನ್ನು ಸಂಪರ್ಕಿಸದೇ ಜಿಲ್ಲೆಯಲ್ಲಿದ್ದಾರೆಂದು ಅಧಿಕೃತರು ತಿಳಿಸಿದ್ದಾರೆ. ಅವರು ಕೂಡಲೇ ಆರೋಗ್ಯ ಇಲಾಖೆ ಸಂಪರ್ಕಿಸುವಂತೆ ನಿರ್ದೇಶನ ನೀಡಲಾಗಿದೆ.
ಕಳೆದ ಜ.30ರಂದು ತ್ರಿಶ್ಯೂರ್‍ನಲ್ಲೂ, ಫೆ. 2ರಂದು ಆಲಪ್ಪುಳ ಜಿಲ್ಲೆಯಲ್ಲಿ ಮೊದಲ ಬಾರಿಗೆ ಚೈನಾದಿಂದ ಬಂದವರಲ್ಲಿ ಕೊರೊನಾ ಪತ್ತೆಯಾಗಿತ್ತು. ಇದೀಗ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಯಲ್ಲೂ ಕೊರೊನಾ ವೈರಸ್ ಪತ್ತೆಯಾಗಿರುವುದು ಆತಂಕಕ್ಕೆಚ ಕಾರಣವಾಗಿದೆ.
ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾಗ್ರತಾ ನಿರ್ದೇಶ ನೀಡಲಾಗಿದೆ. ಈ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಉನ್ನತ ಮಟ್ಟದ ತುರ್ತು ಸಭೆ ಸೇರಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಚರ್ಚಿಸಲಾಯಿತು. ಕಾಸರಗೋಡು ಜಿಲ್ಲೆಯಲ್ಲಿ 80 ರಷ್ಟು ಮಂದಿ ಚೈನಾದಿಂದ ಬಂದವರಿದ್ದಾರೆ ಎಂದು ತಿಳಿಯಲಾಗಿದೆ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾದರೆ ಇನ್ನು ಉಳಿದವರು ವ್ಯಾಪಾರಿಗಳಾಗಿದ್ದಾರೆ.
ರೋಗ ಹರಡದಂತೆ ಜಿಲ್ಲಾಡಳಿತ ಜಾಗ್ರತೆಯ ಸೂಚನೆ:
ಕೊರೋನ ವೈರಸ್ ಹರಡುವುದನ್ನು ಎದುರಿಸಲು ಜಿಲ್ಲೆಯು ಸಂಪೂರ್ಣ ಸಜ್ಜುಗೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಹೇಳಿರುವರು. ಪುಣೆಯ ವೈರೋಲಾಜಿ ಇನ್‍ಸ್ಟಿಟ್ಯೂಟ್‍ನಲ್ಲಿ ಶಂಕಿತರ ರಕ್ತ ಮಾದರಿಯನ್ನು ಕಳುಹಿಸಲಾಗಿದೆ. ಜಿಲ್ಲೆಯಲ್ಲಿ 85 ಜನರು ತಮ್ಮ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಇದೀಗ ಚಿಕಿತ್ಸೆಯಲ್ಲಿರುವ ರೋಗಿಯ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ತೃಪ್ತಿಕರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿಯಂತ್ರಣ ಕೊಠಡಿ :ಚೀನಾದಲ್ಲಿದ್ದ ಜನರು ವರದಿ ಮಾಡಬೇಕು-
ತುರ್ತು ಪರಿಸ್ಥಿತಿಯನ್ನು ಎದುರಿಸಲು ಕಾಞಂಗಾಡು ಡಿಎಂಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಯಿತು. ಚೀನಾದಿಂದ ಜಿಲ್ಲೆಗೆ ಬರುವ ಎಲ್ಲ ವ್ಯಕ್ತಿಗಳು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ನಿಯಂತ್ರಣ ಕೊಠಡಿ ಸಂಖ್ಯೆ 9946000493,0467 2217777, ನಿರ್ದೇಶನ ಟೋಲ್ ಉಚಿತ ಸಂಖ್ಯೆ 0471 2552056 ಸಂಪರ್ಕಿಸಬಹುದು. ಬಾಧಿತರು, ಶಂಕಿತರು ಸಾರ್ವಜನಿಕ ಆರೋಗ್ಯ ಮತ್ತು ವೈಯಕ್ತಿಕ ಸುರಕ್ಷತೆಗಾಗಿ ಸಾರ್ವಜನಿಕ ಚಟುವಟಿಕೆಗಳಿಂದ ದೂರವಿರಬೇಕು ಎಂದು ಸೂಚಿಸಲಾಗಿದೆ.
ಉಪಸಮಿತಿ ರಚನೆ : ಪ್ರತಿರೋಧ ಪ್ರಕ್ರಿಯೆಗೆ ಜಿಲ್ಲೆಯಲ್ಲಿ 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ದಿನಗಳಲ್ಲೂ ಸಂಜೆ 4.30 ರಿಂದ 7 ಗಂಟೆಯ ವರೆಗೆ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ತುರ್ತು ಸಂದರ್ಭ ಎದುರಿಸಲು ಜಿಲ್ಲಾ ಆಸ್ಪತ್ರೆ ಹಾಗು ಜನರಲ್ ಆಸ್ಪತ್ರೆಗಳಲ್ಲಿ 108 ಆ್ಯಂಬುಲೆನ್ಸ್ ಸೇವೆಯನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 18 ಮತ್ತು ಜನರಲ್ ಆಸ್ಪತ್ರೆಯಲ್ಲಿ 12 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 4 ಐಸೋಲೇಶನ್ ವಾರ್ಡ್ ಸಜ್ಜುಗೊಳಿಸಲಾಗಿದೆ.
ಆಲಪ್ಪುಳದಲ್ಲಿ ಸಜ್ಜುಗೊಂಡ ಪರಿಶೀಲನಾ ಲ್ಯಾಬ್:
ಈ ವರೆಗೆ ಕೊರೋನ ವೈರಸ್ ಪತ್ತೆಗೆ ಪುಣೆಯ ವೈರೋಲಜಿ ಆಸ್ಪತ್ರೆಯ ವರದಿಗೆ ಕಾಯಬೇಕಿತ್ತು. ಆದರೆ ರಾಜ್ಯ ಸರ್ಕಾರದ ವಿಶೇಷ ಬೇಡಿಕೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಆಲಪ್ಪುಳ ಜಿಲ್ಲಾಸ್ಪತ್ರೆಗೆ ಕೊರೋನಾ ಸೋಂಕು ಪತ್ತೆ ಲ್ಯಾಬ್ ಗೆ ಸೋಮವಾರ ಅನುಮತಿ ನೀಡಿದ್ದು, ಇದರಿಂದ 4-5 ಗಂಟೆಗಳಲ್ಲಿ ಸೋಂಕಿನ ಪತ್ತೆ ಸಾಧ್ಯವಾಗಲಿದೆ. ಇದಕ್ಕಾಗಿ ವಿಶೇಷ ಲ್ಯಾಬ್ ಹಾಗೂಬ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿತ್ತು, ಕೇಂದ್ರ ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.