ಪೆರ್ಲ: ಪಾರಂಪರಿಕ ಸಂಸ್ಕøತಿಯನ್ನು ಉಳಿಸಿ ಬೆಳೆಸಿದರಷ್ಟೇ ಭವಿಷ್ಯದ ಸಮಾಜ ವ್ಯವಸ್ಥೆ ಸುಸ್ಥಿರವಾಗಿರುವುದು. ಕರಾವಳಿಯ ಹೆಮ್ಮೆಯ ಕಲಾ ಪ್ರಕಾರವಾದ ಯಕ್ಷಗಾನ ನಮ್ಮ ಬೇರುಗಳನ್ನು ನೆನಪಿಸುವ, ನೆಮ್ಮದಿಗೆ ಕಾರಣವಾಗುವ ಸಂದೇಶಗಳೊಂದಿಗೆ ಜನಪ್ರೀಯತೆಗೊಳ್ಳುತ್ತಿರುವುದು ಸಂತಸಕರವಾದರೂ ಪರಂಪರೆಯನ್ನು ಮರೆಯಬಾರದು ಎಂದು ಹಿರಿಯ ಸಮಾಜ ಸೇವಕ, ಪ್ರಗತಿಪರ ಕೃಷಿಕ ಪತ್ತಡ್ಕ ಗಣಪತಿ ಬಟ್ ಅವರು ತಿಳಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಳ್ಳಲಾದ ಪಡ್ರೆ ಚಂದು ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನೇಕ ಸವಾಲುಗಳ ಮಧ್ಯೆ ಸಬ್ಬಣಕೋಡಿ ರಾಮ ಭಟ್ ಅವರು ಪಡ್ರೆಚಂದು ಸ್ಮಾರಕ ನಾಟ್ಯ ಕೇಂದ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಸ್ತುತ್ಯರ್ಹವಾದುದು. ಅನೇಕ ಶಿಷ್ಯವೃಂದ ಇಂದು ತೆಂಕುತಿಟ್ಟಿನ ಪ್ರಮುಖ ಮೇಳಗಳಲ್ಲಿ ಮಿಂಚುತ್ತಿರುವುದು ಕೇಂದ್ರದ ಕಲಿಕಾ ಮಟ್ಟದ ನಿದರ್ಶನವಾಗಿದೆ. ಸಮಾಜದಲ್ಲಿ ಅಂದಕಾರದಿಂದ ಬೆಳಕಿನ ಜ್ಞಾನದ ಮೂಲಕ ಸತ್ಯದ ಸಾಕ್ಷಾತ್ಕಾರಗೊಳಿಸುವವ ಗುರುವಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ಆಸಕ್ತರನ್ನು ಒಗ್ಗೂಡಿಸಿ ಯಕ್ಷಶಿಕ್ಷಣದ ಮೂಲಕ ಬೆಳೆಸುತ್ತಿರುವ ಏಕೈಕ ಕೇಂದ್ರ ಕಾಸರಗೋಡಿನಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಹಿತಿ ಡಾ. ಎಸ್.ಎನ್.ಭಟ್ ಪೆರ್ಲ ಅವರು ಮಾತನಾಡಿ, ನಿಜವಾದ ಬೆಳಕು ನಮ್ಮ ಅಂತರಂಗದಲ್ಲಿ ಸದಾ ಬೆಳಗುತ್ತಿರುತ್ತದೆ. ಆದರೆ ಸತ್ಕರ್ಮ, ಸೇವೆಗಳ ಮೂಲಕ ಅಂತಹ ಬೆಳಕನ್ನು ಸಮಾಜದ ಶ್ರೇಯಸ್ಸಿಗೆ ಬಳಸಿಕೊಂಡಾಗ ಬದುಕು ಸಾಕಾರಗೊಳ್ಳುತ್ತದೆ. ಯಕ್ಷಗಾನ ಇಂತಹ ಅಪೂರ್ವತೆಗೆ ಸಾಕ್ಷಿಯಾಗುವ ಧೀಮಂತ ಕಲೆಯಾಗಿದ್ದು, ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನ ದೀರ್ಘದೃಷ್ಟಿಯ ಯೋಜನೆಗಳ ಅನುಷ್ಠಾನ ಆಗಬೇಕು. ಪಡ್ರೆಚಂದು ಸ್ಮಾರಕ ಇಂತಹ ಯತ್ನಗಳಲ್ಲಿ ಮೇರುತ್ವವನ್ನು ಪಡೆದಿರುವಂತದ್ದು ಎಂದರು.
ಯಕ್ಷಗಾನ ಕಲಾವಿದ, ಉಪನ್ಯಾಸಕ ಎನ್.ಕೆ.ರಾಮಚಂದ್ರ ಭಟ್ ಪನೆಯಾಲ, ರಾಜಾರಾಂ ಪೆರ್ಲ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. ಭಾಗವತರಾದ ಹೊಸಮೂಲೆ ಗಣೇಶ ಭಟ್, ಡಾ.ಸತೀಶ್ ಪುಣಿಂಚಿತ್ತಾಯ ಪೆರ್ಲ, ಡಾ.ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ, ಹಿಮ್ಮೇಳ ವಾದಕ, ಯಕ್ಷರತ್ನ ರಾಘವ ಬಲ್ಲಾಳ್ ಕಾರಡ್ಕ ಅವರಿಗೆ 'ಪಡ್ರೆ ಚಂದು' ನೂರರ ನೆನಪು, ಅಭಿನಂದನೆಯನ್ನು ಗಣ್ಯರ ಸಮಕ್ಷಮ ಪ್ರದಾನಗೈಯ್ಯಲಾಯಿತು.
ಕೇಂದ್ರದ ನಿರ್ದೇಶಕ ಗುರು ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 15 ವರ್ಷಗಳಿಂದ ನಾಟ್ಯ ತರಬೇತಿ ಕೇಂದ್ರ ಸಾಗಿಬಂದ ಏಳು-ಬೀಳುಗಳ ಬಗ್ಗೆ ಮಾತನಾಡಿ ಸಹೃದಯ ಕಲಾಭಿಮಾನಿಗಳು, ಪೋಷಕರ ನೆರವುಗಳಿಂದ ತರಬೇತಿಕೇಂದ್ರ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ತನ್ನ ಗುರುಗಳಾದ ಪಡ್ರೆಚಂದು ಅವರ ಸಂಪೂರ್ಣ ಆಶೀರ್ವಾದ ಈ ಮಟ್ಟಕ್ಕೆ ಬೆಳೆಸಿ ನಿಲ್ಲಿಸಿದೆ ಎಂದು ಸ್ವಾಗತಿಸಿದರು. ಗಣೇಶ್ ಕೆ.ಎಸ್.ಸುಳ್ಯ ವಂದಿಸಿದರು. ರಾಮ ನಾಯ್ಕ್ ಮಾಸ್ತರ್ ಕೊಜಪ್ಪೆ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಏಳ್ಕಾನ ಸಹಕರಿಸಿದರು. ಬಳಿಕ ರಾತ್ರಿ 9.30 ರಿಂದ ಚಿನ್ಮಯ ಕಲಾಕೇಂದ್ರ ಮೂಡಬಿದಿರೆ ವಿದ್ಯಾರ್ಥಿಗಳ 'ಬಬ್ರುವಾಹನ-ವೀರವರ್ಮ ಕಾಳಗ', 11.30ರಿಂದ ಕೇಂದ್ರದ ವಿದ್ಯಾರ್ಥಿಗಳ 'ಮದನಾಕ್ಷಿ ತಾರಾವಳಿ-ಗರುಡ ಗರ್ವಭಂಗ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.