ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗಾರ, ಉತ್ತರ ಮಲಬಾರಿನಲ್ಲಿ ಕಮ್ಯುನಿಸ್ಟ್ ಪಕ್ಷ ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಮಾಜಿ ರಾಜ್ಯ ಸಭಾ ಸದಸ್ಯ, ಕೇರಳದ ಮಾಜಿ ಸಚಿವ, ಮಾಜಿ ಶಾಸಕ ಹಾಗೂ ಪ್ರತ್ಯೇಕವಾಗಿ ತುಳುನಾಡಿನ ಹೆಮ್ಮೆಯ ಮೌಲ್ಯಾಧಾರಿತ ರಾಜಕೀಯ ಸಿದ್ದಾಂತವನ್ನು ನಿಸ್ವಾರ್ಥತೆಯಿಂದ ಸಾಮಾಜಿಕ ರಂಗದಲ್ಲಿ ಅಳವಡಿಸಿಕೊಂಡ ಡಾ. ಎ. ಸುಬ್ಬರಾವ್ ರವರ ಜನ್ಮಶತಮಾನೋತ್ಸವ ಆಚರಣೆಯ ಸಮಾರೋಪ ಸಮ್ಮೆಳನ ಇಂದು (ಫೆ.9 ಭಾನುವಾರ) ಸಂಜೆ 3.30 ಕ್ಕೆ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಬಿ.ವಿ. ರಾಜನ್ ಮಂಜೇಶ್ವರ ಪ್ರೆಸ್ ಕ್ಲಬ್ಬಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಪಿಐ ರಾಷ್ಟ್ರೀಯ ನಿಯಂತ್ರಕ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸತ್ ಸದಸ್ಯ ಪನ್ಯನ್ ರವೀಂದ್ರನ್ ಸಮ್ಮೆಳನವನ್ನು ಉದ್ಘಾಟಿಸುವರು. ಕೇರಳ ಕಂದಾಯ ಸಚಿವ ಇ ಚಂದ್ರಶೇಖರ್ ಹಾಗೂ ಸಿಪಿಐ ರಾಜ್ಯ ನಿಯಂತ್ರಕ ಸಮಿತಿ ಅಧ್ಯಕ್ಷ ಸಿ.ಪಿ. ಮುರಳಿ ಅವರು ಸುಬ್ಬರಾವ್ ಅವರ ಬಗ್ಗೆ ಉಪನ್ಯಾಸ ನೀಡುವರು. ಈ ಸಂದರ್ಭ ಡಾ. ರಮಾನಂದ ಬನಾರಿಯವರು ರಚಿಸಿದ ``ಶತಮಾನ ಶ್ರದ್ದಾಂಜಲಿ" ಎಂಬ ಕವಿತಾ ಸಂಕಲನ ಬಿಡುಗಡೆ ಹಾಗೂ ವಾಚನ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಬೇವಿನಕೊಪ್ಪದ ನಿತ್ಯಾನಂದ ಧ್ಯಾನ ಮಂದಿರದ ಶ್ರೀ ವಿಜಯಾನಂದ ಸ್ವಾಮೀಜಿ ಅವರು ಸುಬ್ಬರಾವ್ ರವರ ಜೀವನ ರೀತಿಯ ಅಪೂರ್ವ ಘಟನೆಗಳನ್ನು ಸ್ಮರಿಸಿ ಮಾತನಾಡುವರು. ಮಂಜೇಶ್ವರದ ಕೇಶವ ಇಡ್ಯ ಅವರಿಗೆ ಈ ಸಂದರ್ಭ ಸನ್ಮಾನ ಹಾಗೂ ಅವರ ತಂಡಕ್ಕೆ ಗೌರಾರ್ಪಣೆ ನಡೆಯಲಿದೆ. ಬಳಿಕ ಇಂಚರ ತಂಡದ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ವೇದಿಕೆಯಲ್ಲಿ ನೇತಾರರಾದ ಗೋವಿಂದನ್ ಪಳ್ಳಿಕಾಪಿಲ್, ಟಿ ಕೃಷ್ಣನ್, ಬಂಗಳಂ ಪಿ. ಕುಂಞÂಕೃಷ್ಣನ್, ಕೆ.ವಿ.ಕೃಷ್ಣನ್, ಭಾರ್ಗವಿ, ವಿಜಯಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಜಯರಾಂ ಬಲ್ಲಂಗುಡೇಲ್, ಅಜಿತ್ ಎಂ.ಸಿ, ರಾಮಕೃಷ್ಣ ಕಡಂಬಾರ್, ಮುಸ್ತಫಾ ಎಂ.ಡಿ. ಪಾಲ್ಗೊಂಡರು.