ಬದಿಯಡ್ಕ: ಕಾಸರಗೋಡು ಜಿಲ್ಲಾ ಪಂಚಾಯಿತಿ ವತಿಯಿಂದ 2017-18ನೇ ಯೋಜನೆಯ ಪ್ರಕಾರ ಪೆರಡಾಲ ಸರ್ಕಾರೀ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ವಿಶ್ರಾಂತಿ ಕಟ್ಟಡವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಜಿಸಿ ಬಶೀರ್ ಹಾಗೂ ಪ್ರಾಥಮಿಕ ವಿಭಾಗದ ನವೀಕೃತ ಕಂಪ್ಯೂಟರ್ ಲ್ಯಾಬ್‍ನ್ನು ಜಿಲ್ಲಾಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು.
ಈ ಸಂದರ್ಭ ನಡೆದ ಸಭಾಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷ ಎಜಿಸಿ ಬಶೀರ್ ಮಾತನಾಡಿ ಪಾಲಕರು ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಿದ್ದರೆ ಅದು ಅವರ ವಿದ್ಯಾಭ್ಯಾಸಕ್ಕೆ ಪೂರಕವಾಗವುದಲ್ಲದೆ ಫಲಿತಾಂಶವನ್ನು ಹೆಚ್ಚಿಸಲು ಸಾಧ್ಯವಿದೆ. ಶಾಲೆಗೆ ಸುಸಜ್ಜಿತವಾದ ಅಡುಗೆ ಕೋಣೆಯನ್ನು ನಿರ್ಮಿಸುವ ಕುರಿತು ಆಲೋಚಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಲ್ಯಾಬ್ ನವೀಕರಣಕ್ಕೆ 40000 ರೂಪಾಯಿಯನ್ನು ನೀಡಿದ ಅಧ್ಯಾಪಿಕೆ ಚಂದ್ರಾವತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶಾಲೆಗಳು ಅಭಿವೃದ್ಧಿಯನ್ನು ಹೊಂದಿದರೆ ಮುಂದಿನ ಜನಾಂಗವು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತದೆ. ರಕ್ಷಕರು ಹಾಗೂ ಅಧ್ಯಾಪಕರ ಶ್ರಮವು ಶಾಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ ಎಂದು ತಿಳಿಸಿದರು. ಈ ಬಾರಿಯ ಎಸ್.ಎಸ್.ಎಲ್.ಸಿ.ಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಸೂಕ್ತ ಬಹುಮಾನವನ್ನು ನೀಡುವುದಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ನುಡಿಗಳನ್ನಾಡಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯೆ ಶಾಂತಾ ಎಂ., ಶಾಲಾ ರಕ್ಷಕ ಶಿಕ್ಷಕ ಸಂಘದ ಬಡುವನ್ ಕುಂಞÂ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಚಂದ್ರಹಾಸನ್ ನಂಬ್ಯಾರ್, ಅಧ್ಯಾಪಿಕೆ ದಿವ್ಯಗಂಗಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ ಸ್ವಾಗತಿಸಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಮುರಿಯಂಕೂಡ್ಲು ವಂದಿಸಿದರು.