ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಒಟ್ಟಿಗೆ ಮರಣದಂಡನೆಗೆ ಒಳಪಡಿಸಬೇಕು ಹೊರತು ಪ್ರತ್ಯೇಕವಾಗಿ ಅಲ್ಲವೆಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ. ಇದಕ್ಕಾಗಿ ಹೈಕೋರ್ಟ್ ಎಲ್ಲಾ 4 ಅಪರಾಧಿಗಳಿಗೆ ಒಂದು ವಾರ ಕಾಲಾವಕಾಶ ನೀಡಿ ಅವರಿಗೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಆ ಒಂದು ವಾರದಲ್ಲಿ ಕೈಗೊಂಡು ಮುಗಿಸುವಂತೆ ಸೂಚಿಸಿದೆ.ಒಂದು ವಾರದ ನಂತರಅವರ ಮರಣದಂಡನೆ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನಿರ್ಭಯಾ ಪ್ರಕರಣದಲ್ಲಿ ಮೇಲಿನ ತೀರ್ಪು ಪ್ರಕಟಿಸಿದ್ದಾರೆ.ಅಪರಾಧಿಗಳ ಮರಣದಂಡನೆಯನ್ನು ತಡೆಹಿಡಿಯುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತು.ಪ್ರಕರಣದ ನಾಲ್ವರು ಆರೋಪಿಗಳ ಮರಣದಂಡನೆಗೆ "ಮುಂದಿನ ಆದೇಶದವರೆಗೆ" ತಡೆ ವಿಧಿಸಿ ಚಾರಣಾ ನ್ಯಾಯಾಲಯ ನಿರ್ದೇಶಿಸಿದೆ. ಜನವರಿ 31 ರ ಆದೇಶವನ್ನು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಗಳು ಪ್ರಶ್ನಿಸಿದ್ದವು.
ನಿರ್ಭಯಾ ಸಾಮೂಹಿಕ ಅತ್ಯಾಚಾರದ ಅಪರಾಧಿಗಳಾದ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31), ಸಧ್ಯ ತಿಹಾರ್ ಜೈಲಿನಲ್ಲಿದ್ದಾರೆ.
ನಿರ್ಭಯಾ ಅಪರಾಧಿಗಳಿಂದ ಕಾನೂನು ದುರ್ಬಳಕೆ- ರವಿಶಂಕರ್ ಪ್ರಸಾದ್:
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ತಮ್ಮ ಗಲ್ಲಿಗೇರಿಸುವಿಕೆಯನ್ನು ಮುಂದೂಡಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ತೀರ್ಪನ್ನು ಶೀಘ್ರ ಜಾರಿಗೆ ಬಿಡುತ್ತಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ
ಲೋಕಸಭೆಯಲ್ಲಿ ಮಾತನಾಡಿದ ಸಚಿವರು, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಪರಾಧಿಗಳಿಗೆ ಮರಣದಂಡನೆಯನ್ನು ಎತ್ತಿಹಿಡಿದಿದೆ. ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ ಆದರೆ ಅಪರಾಧಿಗಳು ಶಿಕ್ಷೆಯನ್ನು ಮುಂದೂಡಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಇದು ಸರಿಯಲ್ಲ ಎಂದು ಅವರು ಹೇಳೀದ್ದಾರೆ.