ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿ ವಠಾರದ ಕನ್ನಡ ನಾಮಫಲಕವೊಂದು ಜಿಲ್ಲೆಯಲ್ಲಿ ಭಾಷಾ ಅಲ್ಪಸಂಖ್ಯಾತರಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿನ ಪಂಚಾಯಿತಿ ಉಪ ನಿರ್ದೇಶಕರ ಕಚೇರಿ ಹೊರಗೆ ಅಳವಡಿಸಿದ ನಾಮಫಲಕದಲ್ಲಿ ಕನ್ನಡವನ್ನು ಅಪಭ್ರಂಶಗೊಳಿಸಲಾಗಿದೆ. ಪಂಚಾಯಿತಿ ಉಪ ನಿರ್ದೇಶಕರ ನಾಮಫಲಕದಲ್ಲಿ ಪಂಚಾಯತ್ ಅಸಿಸ್ಟೆಂಟ್ ಡೈರೆಕ್ಟರ್ ಎಂಬುದನ್ನು ಕನ್ನಡದಲ್ಲಿ'ಪಂತ್ತಾಯತ್ ಅಸಿಟಂಟ್ ಡಯರಕ್ಟರ್ ದನೀಶ್ ಪಿ.ಎಂ' ಎಂದು ನಮೂದಿಸಲಾಗಿದೆ.
ವಿದ್ಯಾನಗರ ಸಿವಿಲ್‍ಸ್ಟೇಶನ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸನಿಹವೇ ಈ ಅಪಭ್ರಂಶ ಕನ್ನಡದ ನಾಮಫಲಕ ಅಳವಡಿಸಲಾಗಿದೆ. ಸಿವಿಲ್‍ಸ್ಟೇಶನ್‍ನಲ್ಲಿ ಹಲವು ಮಂದಿ ಕನ್ನಡಿಗ ಸಿಬ್ಬಂದಿಯಿದ್ದಾರೆ. ಜತೆಗೆ ಮಲಯಾಳದಿಂದ ಕನ್ನಡಕ್ಕೆ ಭಾಷಾಂತರಿಸುವ ಸೆಲ್ ಒಂದು ಕಾರ್ಯಾಚರಿಸುತ್ತಿದ್ದರೂ, ಈ ನಾಮಫಲಕದ ಬಗ್ಗೆ ಯಾರೂ ಚಕಾರವೆತ್ತದಿರುವುದು ದುರದೃಷ್ಟಕರ ಎಂಬುದಾಗಿ ಕನ್ನಡಪರ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.ಭಾಷಾ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಧೋರಣೆ ತಳೆಯುತ್ತಿರುವ ಸರ್ಕಾರ, ಕನ್ನಡ ಭಾಷೆಯ ಬಗೆಗಿನ ತಮ್ಮ ನಿರ್ಲಕ್ಷ್ಯ ಧೋರಣೆಯನ್ನು ನಾಮಫಲಕದ ಮೂಲಕ ಹೊರಹಾಕಿದೆ.
ಕನ್ನಡ ನಾಮಫಲಕ ಅಳಡಿಸುವ ಸಂದರ್ಭ ಕನ್ನಡ ಅರಿತವರ ಸಲಹೆ ಪಡೆದುಕೊಳ್ಳುತ್ತಿದ್ದಲ್ಲಿ ಈ ರೀತಿಯ ಎಡವಟ್ಟಾಗುತ್ತಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕನ್ನಡಪರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.