ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಐದನೇ ದಿನವಾದ ಸೋಮವಾರ ಬೆಳಗ್ಗೆ ಗಣಪತಿ ಹವನ, ಅಂಕುರಪೂಜೆ, ತತ್ವ ಹೋಮ ಮತ್ತು ತತ್ವಕಲಶ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ನಡೆದವು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀಕ್ಷೇತ್ರಕ್ಕೆ ಆಗಮಿಸಿದರು. ಪೂರ್ಣಕುಂಭ ಸ್ವಾಗತದೊಡನೆ ಶ್ರೀಗಳನ್ನು ಕ್ಷೇತ್ರದ ಹಿರಿಯರು ಮತ್ತು ಮಾತೃಮಂಡಳಿ ಸದಸ್ಯರು ಬರಮಾಡಿಕೊಂಡರು. ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳು ತುಳು ಲಿಪಿಯಲ್ಲಿ ಕೆತ್ತಲಾಗಿದ್ದ ಶಿಲೆಯನ್ನು ವೀಕ್ಷಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನಗೈದು ಶ್ರೀಕ್ಷೇತ್ರದ ಸ್ವಚ್ಛ ಪರಿಸರ, ಅದನ್ನು ಸ್ವಚ್ಛವಾಗಿಡುವುದರಲ್ಲಿ ಪ್ರತಿಯೊಬ್ಬ ಸ್ವಯಂಸೇವಕನ ಪಾತ್ರವನ್ನು ಮತ್ತು ಓಂಕಾರದ ಪ್ರಾಧಾನ್ಯವನ್ನು ನಾಡಭಾಷೆ ತುಳುವಿನಲ್ಲೇ ವಿವರಿಸಿ ಹೇಳಿದರು.
ಸಭೆಯಲ್ಲಿ ಪ್ರಖರ ವಾಗ್ಮಿ ಮತ್ತು ಪ್ರಾಧ್ಯಾಪಕ ಆದರ್ಶ ಗೋಖಲೆ ಕಾರ್ಕಳ ಅವರು ಧಾರ್ಮಿಕ ಭಾಷಣ ಮಾಡಿದರು. ಅವರು ಮಾತನಾಡಿ ಭಾರತವು ವಿಶ್ವದ ದೇವರ ಕೋಣೆ ಇದ್ದಂತೆ, ಇದು ದೇವತೆಗಳ ತವರೂರು. ಇಲ್ಲಿನ ಸಂಸ್ಕøತಿ-ಪರಂಪರೆಯನ್ನು ಉಳಿಸಿಬೆಳೆಸಲು ಪ್ರತಿಮನೆಗಳಲ್ಲೂ ರಾಷ್ಟ್ರಭಕ್ತಿಯನ್ನು ಬೆಳೆಸುವ ಶಿಕ್ಷಣವನ್ನು ಬೋಧಿಸುವಂತಹ ಮಹತ್ಕಾರ್ಯ ಆಗಲೇಬೇಕಿದೆ. ದೇಶ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ; ಇವೆರಡರನ್ನು ಉಳಿಸಿ ಬೆಳೆಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಎಂ ಸಂಜೀವ ಶೆಟ್ಟಿ, ಉದ್ಯಮಿ ಕೆ. ಸುರೇಶ್, ಅಭಿಲಾಶ್ ಕೆ. ವಿ, ಸತೀಶ್ ಶೆಟ್ಟಿ ಊಜಂತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ತಲೇಕ (ಅಧ್ಯಕ್ಷರು, ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ, ನಾರಂಪಾಡಿ), ಗಂಗಾಧರ ಶೆಟ್ಟಿ ಆಜಿಲ, ಗಂಗಾಧರ ರೈ ಮಠದಮೂಲೆ (ನಿವೃತ್ತ ಮುಖ್ಯೋಧ್ಯಾಪಾಯರು, ಸಂಚಾಲಕರು- ಸಾಂಸ್ಕೃತಿಕ ಸಮಿತಿ), ಕೆ. ವಿ ರಮೇಶ ಶರ್ಮ (ಕಾರ್ಯದರ್ಶಿ, ಶ್ರೀ ಧರ್ಮಶಾಸ್ತಾ ಭಜನಾ ಮಂದಿರ, ಶ್ರೀ ಅನ್ನಪೂರ್ಣ ಸರ್ಕಲ್- ಕುರುಮುಜ್ಜಿಕಟ್ಟೆ) ಮುಂತಾದವರು ಶುಭಾಶಂಸನೆಗೈದರು. ನಾರಾಯಣ ರೈ ಬೆಳಿಂಜ (ಅಧ್ಯಕ್ಷರು, ಶ್ರೀ ಮಹಾವಿಷ್ಣು ಕ್ಷೇತ್ರ ಸೇವಾ ಸಮಿತಿ, ಆಲಿಂಜ) ಮತ್ತು ಶ್ರೀ ಕ್ಷೇತ್ರದ ಸೇವಾ ಸಮಿತಿ ಕಾರ್ಯಕಾರಿ ಸದಸ್ಯರಾದ ಅಪ್ಪಕುಂಞ ಮಣಿಯಾಣಿ ಕೂಡಾ ಉಪಸ್ಥಿತರಿದ್ದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ರೈ ಮಠದಮೂಲೆ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸದಾಶಿವ ರೈ ಗೋಸಾಡ ವಂದಿಸಿದರು. ಪ್ರಚಾರ ಸಮಿತಿ ಸಂಚಾಲ ರಾಜೇಶ್ ಶೆಟ್ಟಿ ಬಲೆಕ್ಕಳ ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ಶ್ರೀಕೃಷ್ಣ ಚೇಕ್ಕೋಡು ಭಕ್ತಿ ಸಂಕೀರ್ತನೆ ನಡೆಯಿತು. ನಂತರ ಶಿವಳ್ಳಿ ಯಕ್ಷಸ್ನೇಹಿ ಬಳಗ, ಏತಡ್ಕ ಮತ್ತು ಅತಿಥಿ ಕಲಾವಿದರಿಂದ 'ಸುಧನ್ವಾರ್ಜುನ' ಎಂಬ ಯಕ್ಷಗಾನ ತಾಳಮದ್ದಳೆ ಕಚೇರಿ ನಡೆಯಿತು.
ಇಂದಿನ ಕಾರ್ಯಕ್ರಮ:
ಫೆ.11ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, 9.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ನಾರಾಯಣ ರೈ ಕುದ್ಕಾಡಿ ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಜಯದೇವ ಖಂಡಿಗೆ, ನ್ಯಾಯವಾದಿ ಕೆ.ಶ್ರೀಕಾಂತ್, ಸಿ.ಎಚ್.ಕುಂಞಂಬು, ವಿಘ್ವೇಶ್ವರ ಚಡಗ, ಸುಬ್ರಹ್ಮಣ್ಯ ಕಡಂಬಳಿತ್ತಾಯ, ಚಂದ್ರಶೇಖರ ರಾವ್ ಕಲ್ಲಗ, ಸುರೇಶ್ ಎಸ್.ಶೆಟ್ಟಿ ಉಪಸ್ಥಿತರಿರುವರು. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ ಹರಿಕಥಾ ಸತ್ಸಂಗ, ನೃತ್ಯೋಪಾಸನಂ, ರಾತ್ರಿ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳುವುದು.