ಕಾಸರಗೋಡು: ಜಿಲ್ಲಾ ಪಂಚಾಯತ್ ನ ಅಭಿವೃದ್ಧಿ ವಿಚಾರಸಂಕಿರಣ ಸೋಮವಾರ ಜರುಗಿತು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಭೋಜನ, ವಸತಿಯೊಂದಿಗೆ ಶಿಕ್ಷಣ ಒದಗಿಸುವ ಅಕಾಡೆಮಿಯೊಂದು ಕಾಸರಗೋಡು ನಗರದ ಹೃದಯಭಾಗದಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದರು.
ಇದಕ್ಕಾಗಿ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಮೀಸಲಿರಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಇಲಾಖೆ ಸಚಿವರ ಪೂರ್ಣ ಬೆಂಬಲದೊಂದಿಗೆ ಆರಮಭಿಸುವ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ತರಬೇತಿ ಆರಂಭಿಸಲಾಗುವುದು. ಪಿ.ಎಸ್.ಸಿ., ಎಂ.ಬಿ.ಬಿ.ಎಸ್., ಇಂಜಿನಿಯರಿಂಗ್, ಸಿವಿಲ್ ಸರ್ವೀಸ್ ಸಹಿತ ತರಬೇತಿಗಳು ಇಲ್ಲಿರುವುವು. ಫಲಾನುಭವಿಯ ಬದುಕಿನುದ್ದಕ್ಕೂ ಉಪಕಾರ ಪ್ರದವಾದ ಯೋಜನೆ ಎಂಬ ಆಶಯದೊಂದಿಗೆ ಈ ಕ್ರಮ ಜಾರಿಗೊಳಿಸಲಾಗುವುದು ಎಂದವರು ಹೇಳಿದರು.
ಕೋಟಯಂ ಜಿಲ್ಲೆಯ ಕುಮರಕಂಗೆ ಸಮಾನವಾದ ಹೈಡ್ರೋ ಟ್ಯೂರಿಸಂ ಜಿಲ್ಲೆಯ ನೀಲೇಶ್ವರದಿಂದ ಏಳಿಮಲೆ ವರೆಗೆ ಅಭಿವೃದ್ಧಿ ಪಡಿಸಲು ಸಂಸದ ಸಂಬಂಧಪಟ್ಟವರಿಗೆ ಆದೇಶ ನೀಡಿದ್ದಾರೆ. ಕುಮರಕಂ ಗಿಂತ ತ್ಯಾಜ್ಯಮುಕ್ತ ನೀರು ಇಲ್ಲಿದ್ದು, ಪ್ರವಾಸೋದ್ಯಮಕ್ಕೆ ಇದು ಪೂರಕಾಗಿದೆ ಎಂದರು. ನದಿ ತಟಗಳಲ್ಲಿ ರೆಸಾರ್ಟ್ ಗಳನ್ನು ನಿರ್ಮಿಸಬೇಕು. ಇದಕ್ಕಿರುವ ಯೋಜನೆಗಳು ಸಿದ್ಧವಾಗಬೇಕು. ಕರಿಂದಳಂ ನಲ್ಲಿ ಆಯುಷ್ ಕೇಂದ್ರ, ಪೆರಿಯದಲ್ಲಿ ಏರ್ ಸ್ಟ್ರಿಪ್ ಗೆ ಕೇಂದ್ರ ಸರಕಾರದ ಮಂಜೂರಾತಿ ಲಭಿಸಿರುವುದು ಪ್ರವಾಸೋದ್ಯಮಕ್ಕೆ ಪೂರಕ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಬರಪರಿಹಾರಕ್ಕೆ ಕಾಸರಗೋಡು ಬ್ಲೋಕ್ ನಲ್ಲಿ ಹೆಚ್ಚುವರಿ ಚೆಕ್ ಡ್ಯಾಂ ನಿರ್ಮಿಸಲಾಗುವುದು. ಊಟಿಯಲ್ಲಿ ಮಾತ್ರ ಇರುವ ಕಡಿಮೆ ವೆಚ್ಚದ ರಬ್ಬರ್ ಚೆಕ್ ಡ್ಯಾಂ ಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು. ವೆಸ್ಟ್ ಏಳೇರಿ ಗ್ರಾಮಪಂಚಾಯತ್ ನಲ್ಲಿ ಚೆಕ್ ಡ್ಯಾಂ ಗಳ ನಿರ್ಮಾಣ ನಡೆಯುತ್ತಿದೆ. ಕಾಸರಗೋಡು ಬ್ಲೋಖ್ ಪಂಚಾಯತ್ ನಲ್ಲಿ 2020-21ನೇ ವರ್ಷದಲ್ಲಿ ಹೆಚ್ಚುವರಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಯೋಜನೆ ಜಾರಿಗೊಳಿಸಲಾಗುವುದು ಎಂದು ನುಡಿದರು. ಪಾಲಕ್ಕಾಡ್ ಜಿಲ್ಲಾ ಪಂಚಾಯತ್ ಜಾರಿಗೊಳಿಸಿದ ಮೀನ್ ವಲ್ಲಂ ಯೋಜನೆಗೆ ಸಮಾನವಾಗಿ ಪೆರಿಯ ಏರ್ ಸ್ಟ್ರಿಪ್ ಕಂಪನಿ ರಚನೆ ಜಿಲ್ಲಾ ಪಂಚಾಯತ್ ಗೆ ನೂತನ ಸ್ವರೂಪ ನೀಡಲಿದೆ. ಮುಖ್ಯಮಂತ್ರಿ ಅವರ ಅನುಮತಿಯೊಂದಿಗೆ ಜಿಲ್ಲಾಡಳಿತೆ ಇದಕ್ಕಾಗಿ 80 ಎಕ್ರೆ ಜಾಗ ಪತ್ತೆಮಾಡಿರುವುದು ಅಭಿಮಾನಕರ ವಿಚಾರ ಎಂದರು.
ಕುಟುಂಬಶ್ರೀ ಮೂಲಕ ತಿನಿಸು ಹುಲ್ಲು ಮತ್ತು ಜಿಲ್ಲೆಯಲ್ಲಿ ನೀರಿನ ಬರ ತಲೆದೋರುವ ಪ್ರದೇಶಗಳಲ್ಲಿ ತೆಂಗಿನನಾರಿನ ಭೂಹಾಸು ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜೂ.5ರಂದು ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ 5 ಲಕ್ಷ ಬಿದಿರು ಸಸಿಗಳನ್ನು ನೆಡಲಾಗುವುದು. ಕಾಸರಗೋಡು ಜಿಲ್ಲೆಯನ್ನು ದೇಶದ ಬಿದಿರು ರಾಜಧಾನಿಯಾಗಿಸುವ ಯೋಜನೆಯ ಅಂಗವಾಗಿ ಇದು ಅನುಷ್ಟಾನಗೊಳ್ಳಲಿದೆ. ಕಳೆದ ವರ್ಷ 2 ಲಕ್ಷ ಬಿದಿರು ಸಸಿಗಳನ್ನು ನೆಡಲಾಗಿದೆ. ಸಾರ್ವಜನಿಕ ಶಿಕ್ಷಣ ಯಜ್ಞದ ಅಂಗವಾಗಿ ಕುಡಿಯುವ ನೀರಿನ ಸರಬರಾಜು ಸಹಿತ ವಿವಿಧ ಯೋಜನೆಗಳಿಗಾಗಿ ಜಿಲ್ಲಾಡಳಿತೆ "ಜ್ಯೋತಿ" ಎಂಬ ಯೋಜನೆ ರಚಿಸಿದೆ. ಜಲಸಂರಕ್ಷಣೆ, ಆಹಾರ ಸುರಕ್ಷೆ, ಸಾಮಾಜಿಕ ಸುರಕ್ಷೆ, ಆರ್ಥಿಕ ಸುರಕ್ಷೆ ಎಂಬ ಆಶಯಗೊಂದಿಗೆ ಈ ಯೋಜನೆ ರಚನೆಗೊಂಡಿದೆ ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಯೋಜನೆ ಸಮಿತಿ ಉಪಾಧ್ಯಕ್ಷ ಡಾ.ಸಿ.ತಂಬಾನ್, ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಕೀರ್ ಅಹಮ್ಮದ್, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಪಾದೂರು ಷಾನವಾಝ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎ.ಪಿ.ಉಷಾ, ಸದಸ್ಯ ಡಾ.ವಿ.ಪಿ.ಪಿ.ಮುಸ್ತಫಾ, ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಪಿ.ರಾಜನ್, ಎಂ.ಗೌರಿ, ಓಮನಾ ರಾಮಚಂದ್ರನ್, ಪಂಚಾಯತ್ ಅಸೋಸಿಯೇಶನ್ ಅಧ್ಯಕ್ಷ ಎ.ಎ.ಜಲೀಲ್, ಮಾಜಿ ಶಾಸಕ ನಾರಾಯಣನ್, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು. ಅಭಿವೃಧ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕರಡು ಯೋಜನೆ ಮಂಡಿಸಿದರು. ನಂತರ ಗುಂಪು ಚರ್ಚೆ ನಡೆಯಿತು. ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು.