ನವದೆಹಲಿ: ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದರೆ ಅದು ಪ್ರಜಾಪ್ರಭುತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಏಕೆಂದರೆ "ಸರ್ಕಾರಗಳು ಯಾವಾಗಲೂ ಸರಿಯಾಗಿರುವುದಿಲ್ಲ" ಮತ್ತು ಸರ್ಕಾರವನ್ನು ಟೀಕಿಸುವವರಿಗೆ ದೇಶದ್ರೋಹಿ ಹಣೆಪಟ್ಟಿ ಕಟ್ಟಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ದೀಪಕ್ ಗುಪ್ತಾ ಅವರು ಸೋಮವಾರ ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯ ಕುರಿತು ಸುಪ್ರೀಂ ಕೋರ್ಟ್ ವಕೀಲರ ಸಂಘ ಆಯೋಜಿಸಿದ್ದ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ದೀಪಕ್ ಗುಪ್ತಾ ಅವರು, "ಸರ್ಕಾರವನ್ನು ವಿರೋಧಿಸುವವರು ಮತ್ತು ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವವರನ್ನು ದೇಶ ದ್ರೋಹಿ ಎಂದು ಕರೆಯುವ ಅನೇಕ ಘಟನೆಗಳು ಇತ್ತೀಚೆಗೆ ನಡೆದಿವೆ ಎಂದರು. ಶೇ. 51 ರಷ್ಟು ಮತ ಪಡೆದರೆ, ಉಳಿದ ಶೇ.49ರಷ್ಟು ಜನ ಐದು ವರ್ಷಗಳ ಕಾಲ ಸರ್ಕಾರದ ವಿರುದ್ಧ ಮತನಾಡಬಾರದು ಎನ್ನುವುದು ಸರಿಯಲ್ಲ. ಪ್ರತಿ ಪ್ರಜೆಯೂ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಯಾವಾಗಲೂ ಸರ್ಕಾರಗಳು ಸರಿಯಾದದನ್ನೇ ಮಾಡುವುದಿಲ್ಲ. ತಪ್ಪುಗಳನ್ನು ಮಾಡುತ್ತವೆ ಎಂದು ದೀಪತ್ ಗುಪ್ತಾ ಹೇಳಿದ್ದಾರೆ.
ಶಾಂತಿಯುತ ವಿಧಾನ ಅಳವಡಿಸಿಕೊಂಡು ಪ್ರತಿಭಟನೆ ಮಾಡುವ ಹಕ್ಕು ಪ್ರತಿಪಕ್ಷಗಳಿಗೆ ಇದೆ ಎಂದು ಪುನರುಚ್ಚರಿಸಿದ ದೀಪಕ್ ಗುಪ್ತಾ ಅವರು, ಎಲ್ಲಾ ನಾಗರಿಕರ ಹಕ್ಕುಗಳನ್ನು ರಕ್ಷಿಸಿದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. "ಭಿನ್ನಾಭಿಪ್ರಾಯವು ಒಂದು ಪ್ರಮುಖ ಪಾತ್ರವನ್ನು ಹೊಂದಿದೆ, ಅದನ್ನು ಪೆÇ್ರೀತ್ಸಾಹಿಸಬೇಕು. ಇದು ದೇಶವನ್ನು ನಡೆಸಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಕಾರಣವಾಗುತ್ತದೆ" ಎಂದು ಅವರು ಹೇಳಿದರು.