ಕುಂಬಳೆ: ಅಧ್ಯಾಪನ ಎಂಬುದು ಅದು ನಿರಂತರ ಕಲಿಕೆ. ವಿದ್ಯಾರ್ಥಿಗಳಿಗೆ ಕಲಿಸಿದ್ದಕ್ಕಿಂತ ಅವರಿಂದ ನಾನು ಕಲಿತದ್ದೆ ಹೆಚ್ಚು ಎಂದು ನಿವೃತ್ತಿ ಹೊಂದಲಿರುವ ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ಸಹ ಶಿಕ್ಷಕಿ ಶಶಿಕಲಾ ಕೆ. ಹೇಳಿದರು.
ಅವರು ಇಪ್ಪತ್ತೈದು ವರ್ಷಗಳ ಸೇವಾವಧಿಯಿಂದ ನಿವೃತ್ತಿ ಹೊಂದಲಿದ್ದು ರಕ್ಷಕ ಶಿಕ್ಷಕ ಸಂಘ ಏರ್ಪಡಿಸಿದ ವಿದಾಯ ಕೂಟದಲ್ಲಿ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕುಂಬಳೆ ಪಂಚಾಯತಿ ವ್ಯಾಪ್ತಿಯಲ್ಲಿ ಶಿಕ್ಷಣ ಗುಣಮಟ್ಟವನ್ನು ಖಾತರಿ ಪಡಿಸಿದ ಶಾಲೆ ಎಂಬುದಕ್ಕೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿನ ಮಕ್ಕಳ ದಾಖಲಾತಿಯೇ ಸಾಕ್ಷಿ ಎಂಬುದನ್ನು ಕಾರ್ಯಕ್ರಮವನ್ನು ಉದ್ಘಾಟಸಿ ಪಂಚಾಯತಿ ಅಧ್ಯಕ್ಷ ಪಂಡರೀಕಾಕ್ಷ ತಿಳಿಸಿದರು. ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ನಿವೃತ್ತಿ ಹೊಂದಲಿರುವ ಅಧ್ಯಾಪಕಿಯನ್ನು ಅಭಿನಂದಿಸಿದರು.
ಗ್ರಾಮ ಪಂಚಾಯತಿ ಶಿಕ್ಷಣ ಸ್ಥಾಯೀ ಸಮಿತಿ ಸಂಚಾಲಕ ಎ.ಕೆ.ಆರೀಫ್, ಸದಸ್ಯರಾದ ಸುಜಿತ್ ರೈ, ಬಿ.ಪಿ.ಒ. ಶಿವರಾಮ, ಕುಂಬಳೆ ಸಂತ ಮೋನಿಕಾ ದೇವಾಲಯದ ಧರ್ಮ ಗುರುಗಳಾದ ವಂದನೀಯ ಸ್ವಾಮಿ ಅನಿಲ್ ಪ್ರಕಾಶ್ ಡಿ'ಸಿಲ್ವಾ ಹಾಗೂ ಮಾತೃ ಸಂಘದ ಅಧ್ಯಕ್ಷೆ ಮೋಳಿ ಲೆನಿನ್ ಉಪಸ್ಥಿತರಿದ್ದರು.
ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುಂದರ ಆರಿಕ್ಕಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಪ್ರಬಂಧಕಿ ಸಿಸ್ಟರ್ ಆ್ಯನ್ನಿ ಜೇಮ್ಸ್ ಸ್ವಾಗತಿಸಿ, ಅಧ್ಯಾಪಕ ವೃಂದದ ಕಾರ್ಯದರ್ಶಿ ವಿಕ್ಟರ್ ವಂದಿಸಿದರು. ರಾಜು ಕಿದೂರು, ಸಿಸ್ಟರ್ ಆಶಾ ಹಾಗೂ ಬಿಜಿ ಕಾರ್ಯಕ್ರಮ ನಿರ್ವಹಿಸಿದರು.