ಕಾಸರಗೋಡು: ಜೀವನದಲ್ಲಿ ನಾಲ್ಕು ಆಶ್ರಮಗಳಿವೆ. ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಇವುಗಳಲ್ಲಿ ಗ್ರಹಸ್ಥಾಶ್ರಮ ಶ್ರೇಷ್ಠ ಎನಿಸಿದೆ. ಗ್ರಹಸ್ಥನು ಇರುವ ಮನೆ ಆಧುನಿಕ ಸೌಕರ್ಯದಿಂದ ತುಂಬಿ ತುಳುಕುವುದಕ್ಕೆ ಪ್ರಾಶಸ್ತ್ಯ ನೀಡದೆ ಸುಸಂಸ್ಕøತ ಬದುಕು ಸಾಗಿಸಲು ರೂಪಿಸುವ ದೇವರ ವರಪ್ರಧಾನ ಪ್ರಾಪ್ತಿ ದೊರೆಯುವ ತಾಣವಾಗ ಬೇಕು. ಸಂತೋಷ, ಆನಂದ ಭರಿತ ಆಲಯವಾಗಲು ಯಜಮಾನನ ಸನ್ನಡತೆ, ಮೃದು ಭಾಷಿಯಾಗಿ ನಡೆದು ಆಗಂತುಕರಲ್ಲಿ ಸಸ್ನೇಹ ಹೊಂದುವಂತಾಗಲು ಯಜಮಾನಿಯ ಕಾರ್ಯಾಚರಣೆ, ಬುದ್ಧಿವಂತ ಮಕ್ಕಳಿಂದ ಬೆಳಕು ಹರಿಯುವ ತಾಣ, ಒಳ್ಳೆ ಗುಣ ನಡತೆಯ ಸುಸಂಸ್ಕøತ ಗೆಳೆಯರ ಗಡಣ ಪಡೆಯುವ ಆವಾಸ ಮತ್ತು ಪರಿಶ್ರಮದ ಧನ ಪ್ರಾಪ್ತಿ ಯಾಗುವ ಪುಣ್ಯ ಭವನ ಆಗಿರಬೇಕು. ದೇವತಾ ಅನುಗ್ರಹದಿಂದ ಇದೆಲ್ಲವನ್ನೂ ಪಡೆಯಲು ಸಾಧ್ಯ. ಹೀಗಾಗಿ ಗ್ರಹಸ್ಥರು ಧರ್ಮ ಪಥದಲ್ಲಿ ಸಾಗಿ ಬದುಕನ್ನು ಬಂಗಾರವಾಗಿಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾ„ೀಶ ಶ್ರೀಮದ್ ಶ್ರೀ ವಿದ್ಯಾರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಶಿಷ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳು ಅನುಗ್ರಹಿಸಿದರು.
ಕಾಸರಗೋಡು ಅಡಿಗೆಕಾರ್ ಕುಟುಂಬ ಟ್ರಸ್ಟ್ ಇಲ್ಲಿನ ಮುಳ್ಳೇರಿಯದಲ್ಲಿ ನಿರ್ಮಿಸುತ್ತಿರುವ ಸಭಾಭವನ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ತೆರಳಿದ ಶ್ರೀಗಳು ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾಸರಗೋಡು ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಮೊಕ್ಕಾಂ ಇರುವ ಉಭಯ ಶ್ರೀಗಳು ಈ ಸಭಾಭವನದ ಕಾಮಗಾರಿ ಕಂಡು ಕಟ್ಟಡದ ನಾಲ್ಕೂ ಭಾಗಗಳಲ್ಲಿ ಹಾಲು ಸುರಿದು ಉದ್ದೇಶಿತ ಕೆಲಸ ಶೀಘ್ರ ಕೊನೆಗೊಂಡು ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವದಿಸಿದರು.
ಅಡಿಗೆಕಾರ್ ಕುಟುಂಬದ ಹಿರಿಯ ದಿ.ಎ.ರತ್ನಾಕರ ರಾವ್ ಅವರ ಹಿರಿಯ ಪುತ್ರ ಕುಟುಂಬದ ಟ್ರಸ್ಟ್ ಅಧ್ಯಕ್ಷ ಎ.ರಂಗನಾಥ ರಾವ್ ಅವರ ಪದ್ಮಾವತಿ ನಿವಾಸಕ್ಕೆ ತೆರಳಿದ ಉಭಯ ಶ್ರೀಗಳು ಅಲ್ಲಿ ದಂಪತಿಗಳಿಂದ ಪಾದ ಪೂಜೆ ಸ್ವೀಕರಿಸಿ ಬಳಿಕ ಮನೆ ದೇವರ ಪೂಜೆ ನಡೆಸಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ರಂಗನಾಥ ರಾವ್ ಸಹೋದರರಾದ ಎ.ರಮಾನಂದ ರಾವ್, ಎ.ರವಿಚಂದ್ರ ರಾವ್, ಎ.ರಾಘವೇಂದ್ರ ರಾವ್ ಅವರೂ ಶ್ರೀೀಗಳಿಂದ ಪ್ರಸಾದ ಪಡೆದರು. ಬಳಿಕ ಶ್ರೀಗಳು ಎ.ರವಿಚಂದ್ರ ರಾವ್ ಅವರ ಅಂಗಡಿಗೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಮಾಲೀಕರಿಗೆ ಮೂಲಧನ ನೀಡಿ ಹರಸಿದರು.