ಮಂಜೇಶ್ವರ: ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ಕೃಪಾ ಜೈವೀರ ಮಾರುತಿ ವ್ಯಾಯಾಮ ಶಾಲೆಯ ಭಜನಾ ಕಾರ್ಯಕ್ರಮದ ರಜತ ಮಹೋತ್ಸವ ಮಾರ್ಚ್ ತಿಂಗಳ 25 ರಿಂದ 29 ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಾವರ ಶ್ರೀ ದೈವಗಳ ಕ್ಷೇತ್ರದಲ್ಲಿ ದೈವ ಪಾತ್ರಿಗಳಾದ ಶ್ರೀ ರಾಜ ಬೆಳ್ಚಪಾಡ ಮತ್ತು ಶ್ರೀ ತಿಮಿರಿ ಬೆಳ್ಚಪಾಡ ಅವರು ಪ್ರಾರ್ಥಿಸಿ ನಂತರ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗುರಿಕಾರರಾದ ಪದ್ಮನಾಭ ಹಲಸಿನಡಿ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸದಾನಂದ ಹತ್ತನೇ ಮೈಲು, ಹರೀಶ್ ಶೆಟ್ಟಿ ಮಾಡ, ಜನಾರ್ಧನ ಕಟ್ಟಪುಣಿ ಮತ್ತು ವ್ಯಾಯಾಮ ಶಾಲೆಯ ಸದಸ್ಯರುಗಳು ಉಪಸ್ಥಿತರಿದ್ದರು.
ರಜತ ಮಹೋತ್ಸವ ಕಾರ್ಯಕ್ರಮ ಮಾ.25 ರಂದು ಪ್ರಾರಂಭಗೊಳ್ಳಲಿದ್ದು, ಅದೇ ದಿನ ಉಭಯ ಜಿಲ್ಲೆಗಳ ಪ್ರಸಿದ್ಧ ಮೂರು ತಂಡಗಳಿಂದ ತಾಲೀಮು ಪ್ರದರ್ಶನ ನಡೆಯಲಿದೆ. ಮಾ.26 ರಂದು ಶಾಲೆಯ ಮಾತೃ ಮಂಡಳಿ ಸದಸ್ಯರಿಂದ ನಾಟಕ ಹಾಗು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.27 ರಂದು ಸೂರ್ಯಾಸ್ತಕ್ಕೆ ಮಾಣಿಲ ಶ್ರೀಗಳ ಆಶೀರ್ವಚನದೊಂದಿಗೆ ಶ್ರೀನಾಥ್ ಭಟ್ ಆರಿಕ್ಕಾಡಿ ಅವರು ದೀಪ ಪ್ರಜ್ವಲನೆಗೈದು 48 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾ.28 ರಂದು ಸೂರ್ಯಾಸ್ತಕ್ಕೆ ಭಜನಾ ಮಂಗಳೋತ್ಸವ ನಡೆಯುವುದು. ಆ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗಳು ಆಶೀರ್ವಚನ ನೀಡಲಿದ್ದು ಕಮಲಾದೇವಿ ಪ್ರಸಾದ ಅಸ್ರಣ್ಣ, ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಭಾಷಣ ಮಾಡುವರು. ಸಭೆಯ ಅಧ್ಯಕ್ಷತೆಯನ್ನು ಮಧುಸೂದನ ಅಯ್ಯರ್ ಅವರು ವಹಿಸುವರು. ಬಳಿಕ ವಿಜಯ ಕುಮಾರ್ ಕೊಡಿಯಾಲ್‍ಬೈಲು ಅವರ ಕಲಾಸಂಗಮ ತಂಡದವರಿಂದ ಎನ್ನ ಮೈತಿದಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.