ಕುಂಬಳೆ: ಕೇರಳದಲ್ಲಿ ಎಡರಂಗ ಹಾಗೂ ಮುಸ್ಲಿಂಲಿಗ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಮುಂದಿನ ತ್ರಿಸ್ತರ ಪಂಚಾಯತಿ ಚುನಾವಣೆ ಎದುರಿಸಲಿದ್ದು, ಕಾಂಗ್ರೆಸ್ ನ್ನು ಇಲ್ಲವಾಗಿಸಲು ಲೀಗ್ ನೇತೃತ್ವ ಮಾಡಿರುವ ತಂತ್ರದಿಂದ ಕಾಂಗ್ರೆಸ್ ಮೂಲೆಗುಂಪು ಆಗಲಿದೆ. ಜೊತೆಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲೀಗ್ ಹಾಗೂ ಎಡರಂಗದ ಆಂತರಿಕ ಒಪ್ಪಂದದಿಂದ ಸಿಪಿಎಂ ಹಾಗೂ ಸಿಪಿಐ ಪಕ್ಷಗಳು ತ್ರಿಸ್ತರ ಚುನಾವಣೆಯ ಬಳಿಕ ತನ್ನ ಶಕ್ತಿಯನ್ನು ಕಳಕೊಂಡು ಈ ಕ್ಷೇತ್ರದ ರಾಜಕೀಯ ಭೂಪಟದಿಂದ ನಾಶವಾಗಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಭಿಪ್ರಾಯ ಪಟ್ಟಿದೆ.
ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಮಂಡಲ ಸಭೆಯ ಅಧ್ಯಕ್ಷತೆಯನ್ನು ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ ವಹಿಸಿದ್ದರು.
ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ.ಶ್ರೀಕಾಂತ್ ಸಭೆ ಉದ್ಘಾಟಿಸಿದರು. ಚುನಾವಣಾ ದೃಷ್ಟಿಯಿಂದ ಪೌರತ್ವ ಕಾಯ್ದೆಗೆ ವಿರೋಧಿಸಿ ನಕಲಿ ಹೋರಾಟಗಳ ಮೂಲಕ ಜನತೆಯನ್ನು ಕೋಮುವಾದಿಯಾಗಿ ವಿಭಜಿಸಲು ಯತ್ನಿಸಿ ವಿಫಲವಾದ ಮುಸ್ಲಿ0ಲಿಗ್ ಹಾಗೂ ಎಡರಂಗದ ಕಪಟತನಕ್ಕೆ ತ್ರಿಸ್ತರ ಚುನಾವಣೆ ಎಡರಂಗಕ್ಕೆ ರಾಜಕೀಯ ದೀವಾಳಿತನ ಉಂಟು ಮಾಡಲಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಸ್ಥಾಪಕ ದೀನ್ ದಯಾಳ್ ಉಪಾಧ್ಯಾಯರ ಸ್ಮೃತಿ ದಿನ ಯಶಸ್ವಿ ಗೊಳಿಸಲು ತೀರ್ಮಾನಿಸಲಾಯಿತು. ಮುಖಂಡರಾದ ವಿನೋದನ್ ಕಡಪ್ಪರ, ಸತ್ಯ ಶಂಕರ್ ಭಟ್, ಎ. ಕೆ. ಕಯ್ಯಾರ್, ಚಂದ್ರಶೇಖರ್ ಕೋಡಿ, ಆದರ್ಶ್ ಬಿಎಂ ಹೊಸಂಗಡಿ, ಪುಷ್ಪ ಅಮ್ಮೆಕಳ, ರೂಪವಾಣಿ ಆರ್ ಭಟ್, ವಸಂತ ವರ್ಕಾಡಿ, ಜಯಂತ ಪಾಟಾಳಿ, ಸುಧಾಕರ ಕಾಮತ್, ಬಾಬು ಕುಬಣೂರ್, ಹರೀಶ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿ, ದಿನೇಶ್ ಚೆರುಗೊಳಿ ವಂದಿಸಿದರು.