ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.20 ರಿಂದ 28ರ ವರೆಗೆ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ನವೀಕರಣದ ಅಂಗವಾಗಿ ಒಂದು ವರ್ಷಗಳಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀದುರ್ಗಾಪೂಜೆಯ ಸಮಾಪನ ಕಾರ್ಯಕ್ರಮ ಶುಕ್ರವಾರ ರಾತ್ರಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ಆಚಾರ್ಯತ್ವದಲ್ಲಿ ನಡೆಯಿತು.
ಶ್ರೀದುರ್ಗಾಪೂಜೆಯ ಬಳಿಕ ನಡೆದ ಬ್ರಹ್ಮಕಲಶೋತ್ಸವ ನಿರ್ವಹಣೆಯ ಅಂತಿಮ ಸಿದ್ದತಾ ಸಭೆಯಲ್ಲಿ ಆನುವಂಸಿಕ ಮೊಕ್ತೇಸರ ಗೌರೀಶಂಕರ ರೈ ಕೋಡಿಂಗಾರು ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಉದಯಕುಮಾರ್ ಆಯ-ವ್ಯಯ ವರದಿ ನೀಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಟೀಚರ್ ಕಾಸರಗೋಡು, ಗೌರವಾಧ್ಯಕ್ಷೆ ಮೈನಾ ಜಿ.ರೈ, ಪೆರ್ವ ಕೃಷ್ಣ ಭಟ್, ಡಾ.ನರೇಶ್ ರೈ, ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ, ಸುರೇಶ್ ಏವುಂಜೆ ಮೊದಲಾದವರು ಉಪಸ್ಥಿತರಿದ್ದು ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಸಂಬಂಧಿ ಆರ್ಥಿಕ ಸಮಿತಿ ಸಹಿತ ವಿವಿಧ ಉಪ ಸಮಿತಿಗಳ ಕಾರ್ಯಚಟುವಟಿಕೆಗಳ ವಿಸ್ತಾರತೆಗೆ ಮಾರ್ಗದರ್ಶನ ನೀಡಲಾಯಿತು. ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಶಾಮ ಭಟ್ ಏವುಂಜೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ನಿರೂಪಿಸಿದರು.