ಕಾಸರಗೋಡು: ಮಹಾ ಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಬೆಂಗಳೂರು ಮತ್ತು ಕಾಸರಗೋಡು ಶಾಖೆಯ ನೇತೃತ್ವದಲ್ಲಿ 138 ನೇ `ತಿಂಗಳ ಬೆಳಕಿನ ಅಂಗಳದ ಅನುಭಾವ ಸಂಗಮ' ಕಾರ್ಯಕ್ರಮವು ಕಾಸರಗೋಡು ಕರಂದಕ್ಕಾಡು ಲಕ್ಷ್ಮೀವೆಂಕಟೇಶ ರಸ್ತೆಯಲ್ಲಿರುವ `ಗುರು ನಿವಾಸ'ದ ಶರಣೆ ಪನ್ನಗ ವಿ.ರಾವ್ ಮತ್ತು ಶರಣ ಪ್ರವೀಣ ಕೆ.ಜೆ. ದಂಪತಿಗಳ ಮಹಾಮನೆಯಲ್ಲಿ ಜರುಗಿತು.
`ಅನುಭಾವ ಸಂಗಮ' ಕೇಂದ್ರ ಶಾಖೆಯ ಅಧ್ಯಕ್ಷರಾದ ಶರಣ ಜಗನ್ನಾಥಪ್ಪ ಪನಸಾಲೆ `ಕರಲಿಂಗ'ದ ವೈಜ್ಞಾನಿಕತೆಯ ಕುರಿತು ತಿಳಿಸಿದರು. ಬಸವ ಧರ್ಮ ಪೀಠ ಬೆಂಗಳೂರು ರಾಷ್ಟ್ರೀಯ ದಳದ ಮಹಾ ಶರಣ ದೊಡ್ಡ ವೀರಪ್ಪ ಮತ್ತು ಶರಣ ರೇಣುಕಪ್ಪ ಅವರು ಬಸವಾದಿ ಶರಣರ ಚಿಂತನೆಗಳನ್ನು ಮುಂದಿಟ್ಟರು.
ಕಾಸರಗೋಡು ಕೆಳದಿ ವಂಶಸ್ಥ ಹಾಗೂ ಅನುಭಾವ ಸಂಗಮದ ಅಧ್ಯಕ್ಷರಾದ ಸತೀಶ ಕೂಡ್ಲು ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಪ್ರಸ್ತಾವನೆ ಮಾಡಿದರು. ಉಪಾಧ್ಯಕ್ಷರಾದ ದಿವಾಕರ್ ಪಿ. ಅಶೋಕನಗರ ಶರಣರ ಹಾಡುಗಳನ್ನು ಹಾಡಿದರು. 108 ಬಸವ ನಾಮಾವಳಿ, ಸಾಮೂಹಿಕ ಪ್ರಾರ್ಥನೆಯ ಬಳಿಕ ಮಹಾ ಪ್ರಸಾದ ವಿತರಣೆ ನಡೆಯಿತು.