ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪುತ್ತೂರಿನ ವೈಷ್ಣವಿ ನಾಟ್ಯಾಲಯ ತಂಡದ ಶಿಷ್ಯವೃಂದದವರಿಂದ ನಡೆದ `ನಾಟ್ಯರಂಜಿನಿ' ಕಾರ್ಯಕ್ರಮದ ಸಂದರ್ಭದಲ್ಲಿ ಗಾಯಕ ವಸಂತ ಕುಮಾರ್ ಗೋಸಾಡ ಅವರನ್ನು ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ನಾಟ್ಯಾಲಯದ ಪರವಾಗಿ ಶಾಲು ಹೊದೆಸಿ ಗೌರವಿಸಿದರು. ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ ವಸಂತಕುಮಾರ್ ಅವರು ಪ್ರಥಮವಾಗಿ ಭರತನಾಟ್ಯದ ಕಾರ್ಯಕ್ರಮಗಳಿಗೆ ಹಾಡುಗಾರಿಕೆಯನ್ನು ಪ್ರಾರಂಭಿಸಿರುವುದು ನಮ್ಮ ಸಂಸ್ಥೆಯ ಮೂಲಕ ಎಂದು ಹೇಳಲು ಅಭಿಮಾನವಿದೆ. ಪ್ರಸ್ತುತ ಕಾಸರಗೋಡು, ದ.ಕ.ಜಿಲ್ಲೆಯ ಹಲವಾರು ನೃತ್ಯ ಶಿಕ್ಷಕರ ಕಾರ್ಯಕ್ರಮಗಳಿಗೆ ಮುಖ್ಯ ಗಾಯಕರಾಗಿರುವುದು ನಮ್ಮ ನಾಟ್ಯಾಲಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಭವಿಷ್ಯದಲ್ಲಿ ಇಂತಹ ಹಲವಾರು ಅವಕಾಶಗಳು ಅವರಿಗೆ ಒದಗಿ ಬರಲಿ ಹಾಗೂ ಅವರ ಕಲಾಜೀವನವು ಉಜ್ವಲವಾಗಲಿ ಎಂದು ಹಾರೈಸಿದರು.
ವೈಷ್ಣವಿ ನಾಟ್ಯಾಲಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಹಿಮ್ಮೇಳ ಕಲಾವಿದರೆಲ್ಲರ ಪರವಾಗಿ ಸನ್ಮಾನಿತರಿಗೆ ಶಾಲು ಹೊದೆಸಿ ಅಭಿನಂದಿಸಿದರು.
ಗೋಸಾಡದ ಫಕ್ಕೀರ ಮತ್ತು ಕಲ್ಯಾಣಿ ದಂಪತಿಗಳ ಪುತ್ರ, ವಿದ್ವಾನ್ ವೆಂಕಟಕೃಷ್ಣ ಭಟ್ ಅವರ ಶಿಷ್ಯನಾಗಿರುವ ವಸಂತ ಕುಮಾರ್ ಗೋಸಾಡ ಅವರು ಕಳೆದ 16 ವರ್ಷಗಳಿಂದ ವೈಷ್ಣವಿ ನಾಟ್ಯಾಲಯದಲ್ಲಿ ಹಾಡುಗಾರರಾಗಿ ಕಲಾಮಾತೆಯ ಸೇವೆಗೆಯ್ಯುತ್ತಿದ್ದಾರೆ. ತನ್ನ ಹುಟ್ಟೂರಿನಲ್ಲೇ ಇಂತಹ ಒಂದು ಗೌರವಾರ್ಪಣೆಯನ್ನು ಅವರು ನಿರೀಕ್ಷಿಸಿರಲಿಲ್ಲ. ಹಿನ್ನೆಲೆ ಕಲಾವಿದರು, ಪೋಷಕರು ಜೊತೆಗಿದ್ದರು.