ಕಾಸರಗೋಡು: ಬದುಕಿನಲ್ಲಿ ನಡೆದ ಆಕಸ್ಮಿಕ ಘಟನೆಯಿಂದ ವಿಶೇಷಚೇತನರಾಗಿ ಗಾಲಿಕುರ್ಚಿಗೆ ಸೀಮಿತರಾಗಿರುವ ಅಣಂಗೂರಿನ ರಿಯಾಸ್ ಅವರ ಬದುಕಿಗೆ ಲೈಫ್ ಮಿಷನ್ ಯೋಜನೆ ಮೂಲಕ ಸ್ವಂತ ಮನೆ ನಿರ್ಮಾಣವಾಗಿರುವುದು ಸಾಂತ್ವನದ ಸ್ಪರ್ಶ ನೀಡಿದೆ.
ವಿದೇಶದಲ್ಲಿದ್ದ ವೇಳೆ ನಡೆದ ವಾಹನಾಫಘಾತದಲ್ಲಿ ಬೆನ್ನಮೂಳೆಗೆ ತಲಗುಲಿದ ಭಾರೀ ಆಘಾತದ ಪರಿಣಾಮ ಸೊಂಟದ ಕೆಳಗೆ ಬಲಕಳೆದುಕೊಂಡಿರುವ ರಿಯಾಸ್ ಅವರ ಬದುಕು ವೀಲ್ ಚೇರ್ ಗೆ ಸೀಮಿತವಾಗಿದ್ದರೆ, ಅವರ ಸ್ವಂತ ಮನೆಯ ಕನಸಿಗೆ ರಾಜ್ಯಸರಕಾರದ ಲೈಫ್ ಮಿಷನ್ ನನಸಿನ ಸಿಹಿ ಒದಗಿಸಿದೆ.
18 ವರ್ಷಗಳ ಕಾಲ ಯು.ಎ.ಇಯಲ್ಲಿ ನೌಕರಿ ನಡೆಸಿದ ರಿಯಾಸ್ ಅವರು 2002ರಲ್ಲಿ ನಡೆದ ಭೀಕರ ವಾಹನಾಪಘಾತದಲ್ಲಿ ಬೆನ್ನಹುರಿಗೆ ಗಂಭೀರ ಸ್ವರೂಪದ ಏಟುತಗುಲಿ ಸೋಮಟದ ಕೆಳಬದಿ ನಿಸ್ತೇಜರಾಗಬೇಕಾಗಿ ಬಂದಿತ್ತು. ದುಡಿಯಲು ಸಾಧ್ಯವಾಗದೆ, ಬದುಕಿನ ನಿರ್ವಹಣೆಗೆ ಮುಂದೇನು ಎಂಬ ಚಿಂತೆ ಪತ್ನಿ ಮತ್ತು ಪುಟ್ಟ ಮಗನನ್ನು ಹೊಮದಿರುವ ಇವರ ಕುಟುಂಬದ ಮುಂದೆ ಬೃಹದಾಕಾರವಾಗಿ ನಿಂತಿತ್ತು. ಈ ವೇಳೆ ರಾಜ್ಯ ಸರಕಾರದಿಂದ ಭೂಹಕ್ಕು ಪತ್ರ ರೂಪದಲ್ಲಿ ಅಣಂಗೂರಿನಲ್ಲಿ ಲಭಿಸಿದ ನಾಲ್ಕೂವರೆ ಸೆಂಟ್ಸ್ ಜಾಗದಲ್ಲಿ ಕೇಂದ್ರ ಸರಕಾರದ ಪಿ.ಎಂ.ಆರ್.ವೈ, ರಾಜ್ಯ ಸರಕಾರದ ಲೈಫ್ ಮಿಷನ್ ಮತ್ತು ಕಾಸರಗೋಡು ನಗರಸಭೆಯ ಸಹಕಾರದೊಂದಿಗೆ ಲಭಿಸಿದ 4 ಲಕ್ಷ ರೂ. ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಲಭಿಸಿದ ಇನ್ನಿತರ ಸಹಕಾರಗಳೊಂದಿಗೆ ಸುಂದರ ಭವನನಿರ್ಮಾಣವಾಗಿದೆ. 2018 ಡಿಸೆಂಬರ್ ತಿಂಗಳಲ್ಲಿ ನಿರ್ಮಾಣ ಆರಂಭಗೊಂಡಿದ್ದ ಇವರ ಮನೆ 2020 ಫೆಬ್ರವರಿಯಲ್ಲಿ ಪೂರ್ಣಗೊಂಡು, ಫೆ.14ರಂದು ಪ್ರವೇಶೋತ್ಸವ ನಡೆದಿತ್ತು. ಮೂಲತಃ ಉಡುಪಿನಿವಾಸಿ ಪತ್ನಿ ಯಾಸ್ಮಿನ್ ಮತ್ತು 4ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ಪುತ್ರನೊಂದಿಗೆ ಈಗ ರಿಯಾಸ್ ನೆಮ್ಮದಿಯ ನಿಟ್ಟುಸಿರಿನೊಂದಿಗೆ ಬದುಕುತ್ತಿದ್ದಾರೆ.