ಮಂಜೇಶ್ವರ : ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ 2019-20ನೇ ಯೋಜನೆಯ ಭಾಗವಾಗಿ ಆದಿವಾಸಿ ಕಲೋತ್ಸವ ಗೋತ್ರಯಾನ ವಿಚಾರ ಸಂಕಿರಣ ಮತ್ತು ಕಲಾ
ಪ್ರದರ್ಶನವು ಕತ್ತರಿಕೋಡಿಯ ಇ.ಯಂ.ಯಸ್ ಸ್ಮಾರಕ ಗ್ರಂಥಾಲಯದಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನೇತೃತ್ವದಲ್ಲಿ ಇತ್ತೀಚೆಗೆ ಜರಗಿತು.
ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷ ಯಸ್. ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಗೋತ್ರವಿಭಾಗ ಎಂ .ಫಿಲ್. ಪದವೀಧರೆ ಮೀನಾಕ್ಷಿ ಬೊಡ್ಡೋಡಿ ಕಾರ್ಯಕ್ರಮ
ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಅಳಿದು ಮರೆಯಾಗುವ ಹಂತದಲ್ಲಿರುವ ಗೋತ್ರ ಕಲೆಗಳನ್ನು ಪುನಶ್ಚೇತನಗೊಳಿಸಲು ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಯೋಜನೆಯಲ್ಲಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮುಖಾಂತರ ಸಂಘಟಿಸಿದ ಗೋತ್ರಯಾನ ಕಾರ್ಯಕ್ರಮ ಮಾದರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ನಡೆದ ವಿಚಾರ ಸಂಕಿರಣದಲ್ಲಿ 'ಗೋತ್ರ ಕಲೆ-ನೆಲ ಮೂಲ ಸಂಸ್ಕೃತಿ' ಎಂಬ ವಿಷಯದಲ್ಲಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಮಾತನಾಡಿ, ಗೋತ್ರಕಲೆಗಳು ಪ್ರಸ್ತುತ ಸಮಾಜದಲ್ಲಿ ನೈಜತೆಯನ್ನು ಕಳೆದುಕೊಳ್ಳುತಿದೆ. ದೈವಾರಾಧನೆಗೂ, ಕಲೆಗಳಿಗೂ ಆಧುನಿಕತೆಯ ಲೇಪವನ್ನು ನೀಡಲಾಗುತ್ತಿದೆ. ತೆಂಬರೆ, ದುಡಿ ಮೊದಲಾದ ಇತಿಹಾಸವಿರುವ ಕಲಾ ವಸ್ತುಗಳನ್ನು ಮರೆತು ಆಧುನಿಕ ವಸ್ತು ಬಳಸಲಾಗುತ್ತಿದೆ. ಯಾರದೋ ದರ್ಪಕ್ಕೆ ಗೋತ್ರವರ್ಗ ಸಮಾಜದಲ್ಲಿ ಹಿಂದುಳಿದ ವರ್ಗವಾಗಿ ಮಾರ್ಪಾಡಾಗಿದೆ. ಗೋತ್ರಕಲೆಗಳನ್ನು ಸಮಾಜದಲ್ಲಿ ಅಲ್ಪವಾದರೂ ನೆಲೆಯೂರಲು ಅಳಿವಿನಂಚಿನಲ್ಲಿರುವ ಗೋತ್ರಕಲೆಗಳನ್ನು ಯುವ ಜನಾಂಗಕ್ಕೆ ತೋರಿಸಿ ಕೊಡುವ ಅಗತ್ಯವಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಲೈಬ್ರೆರಿ ಕೌನ್ಸಿಲ್ ಸದಸ್ಯ ಶಾಮ ಭಟ್, ಡಿ. ಕಮಲಾಕ್ಷ, ಶ್ರೀಕುಮಾರಿ ಟೀಚರ್, ಉಮೇಶ್ ಅಟ್ಟೆಗೋಳಿ ಮತ್ತು ವರ್ಕಾಡಿ ಗ್ರಾಮ ಪಂಚಾಯತಿ
ಸದಸ್ಯ ಇಂದಿರಾ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸುಜಿತ್ ಕುಮಾರ್ ಬೇಕೂರು, ಜಯರಾಮ ಕತ್ತೆರಿಕೋಡಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ ಕೆ ಸ್ವಾಗತಿಸಿ, ಪುಷ್ಪಲತಾ ಕತ್ತೆರಿಕೋಡಿ ವಂದಿಸಿದರು. ಬಳಿಕ ಗ್ರಂಥಾಲಯ ಕಾರ್ಯಕರ್ತರಿಂದ ಜನಪದ ಹಾಡುಗಳ ಮತ್ತು ಜನ ಪದ ಕಲೆಗಳ ಪ್ರದರ್ಶನ ನಡೆಯಿತು. ಅಶೋಕ ಕೊಡ್ಲಮೊಗರು ಹಾಗೂ ಉದಯ ಸಾರಂಗ್ ಕಾರ್ಯಕ್ರಮ ನಿರ್ವಹಿಸಿದರು. ಇ.ಯಂ.ಯಸ್ ಸ್ಮಾರಕ ಗ್ರಂಥಾಲಯ ಕತ್ತೆರಿಕೊಡಿಯ
ಸದಸ್ಯರು ಸಹಕರಿಸಿದರು.