ಕಾಸರಗೋಡು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಜನರ ಗಮನ ಬೇರೆಡೆ ಸೆಳೆಯಲು ದೇಶದ್ರೋಹಿ ತಂಡಗಳು ದೆಹಲಿಯಲ್ಲಿ ಗಲಭೆಗೆ ವ್ಯವಸ್ಥಿತ ಸಂಚು ರೂಪಿಸಿರುವುದಾಗಿ ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ಆರೋಪಿಸಿದ್ದಾರೆ.
ಅವರು ಗುರುವಾರ ಕಾಸರಗೋಡು ನಗರಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಅವರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಲ್ಲಂ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಹಚ್ಚಲಾದ ಪಾಕ್ ಮದ್ದುಗುಂಡು ಪತ್ತೆ ಪ್ರಕರಣದಲ್ಲಿ ಭಯೋತ್ಪಾದಕರ ತಂಡವೊಂದು ಕೇರಳದಲ್ಲೂ ಸಕ್ರಿಯವಾಗಿರುವುದು ಸಾಬೀತಾಗಿದೆ ಎಂದು ತಿಳಿಸಿದರು. ಪೌರತ್ವ ತಿದ್ದುಪಡಿ ಕಾನೂನು ವಿಚಾರದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಕ್ಷುಲ್ಲಕ ರಾಜಕಾರಣ ನಡೆಸುತ್ತಿರುವುದಾಗಿ ಟೀಕಿಸಿದರು.
ಬಿಜೆಪಿ ರಾಜ್ಯಸಮಿತಿ ಉಪಾಧ್ಯಕ್ಷೆ ಪ್ರಮಿಳಾ ಸಿ.ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಮುಖಂಡರಾದ ಎ.ವೇಲಾಯುಧನ್, ಪಿ.ಸುರೇಶ್‍ಕುಮಾರ್ ಶೆಟ್ಟಿ, ಸದಾನಂದ ರೈ, ಸವಿತಾ ಟೀಚರ್, ಜಿ.ಚಂದ್ರನ್, ಕುಞÂಕಣ್ಣನ್ ಬಳಾಲ್, ಎನ್. ಸತೀಶನ್, ಪುಷ್ಪಾ ಅಮೆಕ್ಕಳ, ಹರೀಶ್ ನಾರಂಪಾಡಿ, ರಾಜೇಶ್ ಕೈಂದಾರ್, ಕೃಷ್ಣನ್ ಉಪಸ್ಥಿತರಿದ್ದರು.