ವಿಟ್ಲ: ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀಕ್ಷೇತ್ರ ಒಡಿಯೂರಿನಲ್ಲಿ ಜರಗುತ್ತಿರುವ ತುಳುನಾಡ ಜಾತ್ರೆ ತುಳು ಸಾಹಿತ್ಯ ಸಮ್ಮೇಳನವು ಭಾನುವಾರದಂದು ಲೇಖಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈಯವರ ಅಧ್ಯಕ್ಷತೆಯಲ್ಲಿ ವಿವಿಧ ಸಾಹಿತ್ಯಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ 9.30ಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ ಸಮ್ಮೇಳನ ಸಭಾಂಗಣದ ವರೆಗೆ ತೆರಳಿತು. ತುಳು ಸಾಹಿತ್ಯ ಸಮ್ಮೇಳನ ಸಂಚಾಲಕರಾದ ಡಾ. ವಸಂತಕುಮಾರ ಪೆರ್ಲ ಅವರು ಸ್ವಾಗತಿಸಿ, ಆಶಯ ಭಾಷಣ ಮಾಡಿದರು. ಶ್ರೀ ಗುರು ದೇವಾನಂದ ಸ್ವಾಮೀಜಿಯವರು ಉದ್ಘಾಟನೆ ನೆರವೇರಿಸಿದರು. ಮಂಗಳೂರು ವಿ. ವಿ. ಕುಲಪತಿ ಡಾ. ಪಿ. ಎಸ್. ಎಡಪಡಿತ್ತಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ಮಲಾರ್ ಜಯರಾಮ ರೈ ಬರೆದ ಅವಧೂತನ ಪಜ್ಜೆಲು ಕೃತಿಯನ್ನು ಡಾ. ಪಿ. ಎಸ್. ಎಡಪಡಿತ್ತಾಯರು ಬಿಡುಗಡೆಗೊಳಿಸಿದರು.
ಅನಂತರ ತುಳುನಾಡಿನ ಋಷಿ ಪರಂಪರೆ, ಕೃಷಿ ಪರಂಪರೆ ಮತ್ತು ಜಾನಪದ ಪರಂಪರೆ ಎಂಬ ವಿಚಾರಗೋಷ್ಠಿ ಏರ್ಪಟ್ಟಿತು. ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ಪ್ರಭಾಕರ ಶಿಶಿಲ ಹಾಗೂ ಡಿ. ಯದುಪತಿ ಗೌಡ ಪ್ರಬಂಧ ಮಂಡಿಸಿದರು.
ಅಪರಾಹ್ನ ಕವಿ ಕಾವ್ಯ ಗಾಯನ ಕುಂಚ ನರ್ತನ ಎಂಬ ವಿಶಿಷ್ಟ ಕಾರ್ಯಕ್ರಮ ಜರಗಿತು. ಕವಿಗಳಾಗಿ ಮಲಾರ್ ಜಯರಾಮ ರೈ, ಹರಿಶ್ಚಂದ್ರ ಶೆಟ್ಟಿ ಸೂಡ, ವಿಶ್ವನಾಥ ಕುಲಾಲ್ ಮಿತ್ತೂರು, ಪೂವಪ್ಪ ನೇರಳಕಟ್ಟೆ, ರಾಜಶ್ರೀ ಟಿ. ರೈ ಪೆರ್ಲ ಹಾಗೂ ಆಶಾ ದಿಲೀಪ್ ಸುಳ್ಯಮೆ ಭಾಗವಹಿಸಿದ್ದರು. ಹಿರಿಯ ಕಲಾವಿದರಾದ ಗಣೇಶ ಸೋಮಾಯಜಿ ಮತ್ತು ಶರತ್ ಹೊಳ್ಳ ಕವಿತೆಗಳಿಗೆ ಕುಂಚದ ಮೂಲಕ ಜೀವ ತುಂಬಿದರು. ಹಾಡುಗಳನ್ನು ರವಿರಾಜ ಶೆಟ್ಟಿ ಒಡಿಯೂರು ಹಾಡಿದರು. ಶ್ರೀ ಗುರುದೇವಾನಂದ ಶಾಲೆಯ ವಿದ್ಯಾರ್ಥಿಗಳು ಅವುಗಳಿಗೆ ನಾಟ್ಯಪ್ರದರ್ಶನ ನೀಡಿದರು.
ಬಳಿಕ ಜರಗಿದ ಸಮಾರೋಪ ಸಮಾರಂಭದಲ್ಲಿ ಸಾಧಕರಾದ ಜಗದೀಶ ಶೆಟ್ಟಿ ಮಂಗಳೂರು (ಯೋಗ), ಕೊಡೆತ್ತೂರು ಹರಿವೇಕಳ ಕಮಲಾಕ್ಷ ಬಂಗೇರ (ಮಾಜಿ ಸೈನಿಕ ಮತ್ತು ಈಜುಪಟು), ಲಕ್ಷ್ಮೀ ಬೇಡಗುಡ್ಡೆ (ನಾಟಿವೈದ್ಯೆ), ಬಾಲಕೃಷ್ಣ ಶೆಟ್ಟಿ ಪಾವೂರು (ಕೃಷಿ), ಮತ್ತು ಕುಟ್ಟಿನಲಿಕೆ (ದೈವಾರಾಧನೆ) ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ತಾಳಮದ್ದಲೆ ಕಲಾವಿದ ಎಂ. ಎಲ್. ಸಾಮಗ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ. ಎ. ಸುಬ್ಬಣ್ಣ ರೈ ಅಧ್ಯಕ್ಷ ಭಾಷಣ ಮಾಡಿ, ಎಲ್ಲರೂ ಒಟ್ಟಾಗಿ ತುಳುವನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯಿ ಉಪನ್ಯಾಸ ನೀಡಿದರು. ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮ್ಮೇಳನ ಸಂಚಾಲಕರಾದ ಡಾ. ವಸಂತಕುಮಾರ ಪೆರ್ಲ ಅವರು ಉಪಸ್ಥಿತರಿದ್ದರು.