ಉಪ್ಪಳ: ತುಳುನಾಡಿನ ಪಾರಂಪರಿಕ ಸೌಹಾರ್ಧತೆಯು ನಾಡು ನುಡಿಗೆ ನೀಡಿದ ಕೊಡುಗೆಯು ಎಂದಿಗೂ ಮಹತ್ತರವಾದುದು. ತುಳುನಾಡಿನ ಪ್ರಾಚೀನ ಜನಪದ, ಸಾಂಸ್ಕøತಿಕ ಶ್ರೀಮಂತಿಕೆಯು ಇತರ ಸಂಸ್ಕøತಿಗಳಿಗಿಂತ ವಿಭಿನ್ನವಾಗಿ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವಲ್ಲಿ ಪಾರಂಪರಿಕವಾದ ಇಂತಹ ಪ್ರಾಚೀನ ಆಚರಣೆಗಳ ಅನುಸರಣೆ ಅಗತ್ಯವಿದೆ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಸಮೀಪದ ಕಾಯರ್ಕಟ್ಟೆ ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಸಹಯೋಗದಲ್ಲಿ ಬೋಳಂಗಳದಲ್ಲಿ ಶುಕ್ರವಾರದಿಂದ ಆರಂಭಗೊಂಡ ಅಣ್ಣ ತಮ್ಮ ಜೋಡುಕರೆ ಕಂಬಳದ ಜನಪದ ಗ್ರಾಮೀಣ ಕ್ರೀಡೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನ ಜಾನಪದೀಯ ಕ್ರೀಡೆಗಳು ಜನಪರವಾಗಿ ಸೌಹಾರ್ಧತೆಯ ಸಂಕೇತವಾಗಿದೆ. ಕೃಷಿ ಪ್ರಧಾನವಾದ ತುಳುನಾಡು ವರ್ತಮಾನದಲ್ಲಿ ಕೃಷಿ ನಿರ್ವಹಣೆಯ ಕೊರತೆಯ ಮಧ್ಯೆ ಪಾರಂಪರಿಕ ಆಚರಣೆ-ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಪ್ರಯತ್ನಗಳು ಅಲ್ಲಲ್ಲಿ ಆಗುತ್ತಿರುವುದು ಭರವಸೆಯಾಗಿ ಉತ್ಸಾಹಕ್ಕೆ ಕಾರಣವಾಗಿದೆ. ಯುವ ಜನಾಂಗದ ಸಹಭಾಗಿತ್ವದಲ್ಲಿ ತುಳುನಾಡಿನ ಪಾರಂಪರಿಕ ಆಚರಣೆ, ಆಟೋಟ, ಕಲಾ ಚಟುವಟಿಕೆಗಳು ಇನ್ನಷ್ಟು ಜನಮನ್ನಣೆಯೊಂದಿಗೆ ನಡೆದುಬರಲಿ ಎಮದು ಅವರು ಹಾರೈಸಿದರು.
ಮಾರಪ್ಪ ಭಂಡಾರಿ ಕೌಡೂರು ಬೀಡು ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ.ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ರೈ ಮಂಜಲ್ತೋಡಿ, ಸಂಚಾಲಕ ಅಬ್ದುಲ್ ರಸಾಕ್ ಚಿಪ್ಪಾರು, ಜಯಪ್ರಕಾಶನಾರಾಯಣ ತೊಟ್ಟೆತ್ತೊಡಿ, ಪ್ರಸಾದ್ ರೈ ಕಯ್ಯಾರು, ಪೈವಳಿಕೆ ಗ್ರಾ.ಪಂ.ಉಪಾಧ್ಯಕ್ಷೆ ಸುನಿತ ವಲ್ಟಿ ಡಿಸೋಜ, ಸುಜಾತಾ ಬಿ ರೈ, ಚನಿಯ ಕೊಮ್ಮಂಗಳ, ಹರೀಶ್ ಬೊಟ್ಟಾರಿ, ಜನಾರ್ದನ ಕಳಾಯಿ, ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಅಶ್ವಥ್ ಪೂಜಾರಿ ಲಾಲ್‍ಬಾಗ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಪೈವಳಿಕೆಯಿಂದ ಬೋಳಂಗಳೋತ್ಸವ ನಡೆಯುವ ಪರಿಸರಕ್ಕೆ ತುಳುನಾಡಿನ ವೈಭವದ ಶೋಭಾಯಾತ್ರೆ ಮೆರವಣಿಗೆ ನಡೆಯಿತು. ಉದ್ಘಾಟನೆಯ ಬಳಿಕ ಆಹ್ವಾನಿತ ತಂಡಗಳಿಂದ ಕೊಕ್ಕೋ, ಕಬ್ಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ , ಚೆನ್ನೆಮಣೆ ಹಾಗೂ ವಿವಿಧ ಜನಪದ ಸ್ಪರ್ಧೆಗಳು ನಡೆಯಿತು. ಸಂಜೆ 6ರಿಂದ ಮ್ಯೂಸಿಕಲ್ ನೈಟ್, ನೃತ್ಯ ವೈಭವ ಸಂಭ್ರಮದಿಂದ ನಡೆಯಿತು.