ಬದಿಯಡ್ಕ: ಸಹಕಾರಿ ಬ್ಯಾಕ್ ಗಳು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇಲ್ಲಿನ ಪ್ರತಿಯೊಂದು ಉಳಿತಾಯದ ಹಣವೂ ಇಲ್ಲಿಯೇ ಬಳಕೆಯಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಜನಾಂಗವು ಸಹಕಾರೀ ಬ್ಯಾಕ್ ಗಳಲ್ಲಿ ತಮ್ಮ ವಹಿವಾಟುಗಳನ್ನು ನಡೆಸುವಂತೆ ಅವರಲ್ಲಿ ಒಲವನ್ನು ಮೂಡಿಸುವ ಕಾರ್ಯವಾಗಬೇಕು. ಪ್ರತೀ ಮನೆಯ ಯುವಜನತೆ ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆಯನ್ನು ಪ್ರಾರಂಭಿಸಬೇಕು ಎಂದು ಕಾಸರಗೋಡು ಸಹಕಾರಿ ಇಲಾಖೆಯ ಸಹನೊಂದಣಾಧಿಕಾರಿ ಮುಹಮ್ಮದ್ ನೌಶದ್ ವಿ. ಹೇಳಿದರು.
ಮಂಗಳವಾರ ಸಂಜೆ ನೀರ್ಚಾಲು ಪೆರಡಾಲ ಸೇವಾಸಹಕಾರಿ ಬ್ಯಾಂಕ್‍ನಲ್ಲಿ ಜರಗಿದ ಗ್ರಾಹಕರ ಸಮಾವೇಶ, ರುಪೇಕಾರ್ಡ್ ವಿತರಣೆ ಹಾಗೂ ಪುಸ್ತಕ ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯವು ಕಂಡ ಭೀಕರ ಪ್ರಳಯದ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಗಳು ಊರಿನ ಜನತೆಯೊಂದಿಗೆ ಕೈಜೋಡಿಸಿದೆಯೇ ಹೊರತು ಇತರ ಬ್ಯಾಂಕ್ ಗಳಲ್ಲ ಎಂಬುದನ್ನು ಜನತೆ ನೆನಪಿಟ್ಟುಕೊಳ್ಳಬೇಕು. ನಮ್ಮ ಉಳಿತಾಯ ಖಾತೆಯು ರಾಜ್ಯದ ಜನತೆಯ ಸುರಕ್ಷತೆಗೆ ಲಭ್ಯವಾಗಬೇಕು. ಸಹಕಾರಿ ಬ್ಯಾಂಕ್ ಗಳ ಲಾಭವು ಇನ್ನಾರಿಗೂ ಹೋಗದೆ ಬ್ಯಾಂಕ್ ನ ಸದಸ್ಯರಿಗೇ ಲಭಿಸುತ್ತದೆ. ಸಾಲ ಪಡಕೊಂಡವರೂ ಯಥಾಸಮಯದಲ್ಲಿ ಮರುಪಾವತಿಯನ್ನು ಮಾಡಿದರೆ ಮಾತ್ರ ಬ್ಯಾಂಕ್ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು ಎಂದರು.
ಬ್ಯಾಂಕ್ ನ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾಸರಗೋಡು ಕೇರಳ ಬ್ಯಾಂಕ್ ಮಹಾ ಪ್ರಬಂಧಕ ಅನಿಲ್ ಕುಮಾರ್ ರುಪೇ ಕಾರ್ಡ್ ವಿತರಣೆಗೆ ಚಾಲನೆಯನ್ನು ನೀಡಿದರು. ಕೇರಳ ಬ್ಯಾಂಕ್‍ನ ಸೌಜಿತ್ ಆ್ಯಂಟನಿ ವಿಚಾರಗಳನ್ನು ಮಂಡಿಸಿದರು. ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಕಾರ್ಯದರ್ಶಿ ಅಜಿತಕುಮಾರಿ ವಿ. ಸ್ವಾಗತಿಸಿ, ಬ್ಯಾಂಕ್ ನ ಆಡಳಿತ ಮಂಡಳಿ ಉಪಾಧ್ಯಕ್ಷ ಗಣಪತಿ ಪ್ರಸಾದ ಕೆ.ವಂದಿಸಿದರು.