ಕುಂಬಳೆ: ಬಂಬ್ರಾಣ -ಕಿದೂರು ಗ್ರಾಮದ ಪ್ರತಿಷ್ಠಿತ 8 ಬಂಟ ಮನೆತನಗಳಲ್ಲಿ ಒಂದಾಗಿರುವ ಉಜಾರ್ ಮನೆಯಲ್ಲಿ ಪುತ್ತಿಗೆ ಹೊಸಮನೆ ಕವಲಿ ನವರ ಹರಿಸೇವೆ ಧರ್ಮನೇಮ ಪ್ರಾಯಶ್ಚಿತಾದಿ ಹೋಮ-ಹವನಗಳು ಇತ್ತೀಚೆಗೆ ನಡೆಯಿತು. ಗ್ರಾಮದ ತಂತ್ರಿ ವರ್ಯ ಕರ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ ವೈದಿಕ ತಾಂತ್ರಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಹಲವಾರು ವರ್ಷಗಳಿಂದ ಹಲವಾರು ಕವಲುಗಳಾಗಿ ಹೊಡೆದು ಹೋಗಿದ್ದ ಕುಟುಂಬವು ಈ ಸಂದರ್ಭದಲ್ಲಿ ಒಂದಾಯಿತು.
ಇದೇ ಸಂದರ್ಭದಲ್ಲಿ ಯಕ್ಷಕಲಾ ಭಾರತಿ ಪ್ರತಾಪ್ ನಗರ ಮಂಗಲ್ಪಾಡಿ ಇವರಿಂದ ಭೀಷ್ಮ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಈ ಸಂದರ್ಭ ಆಗಮಿಸಿ ಬಂಟರ ಕುಟುಂಬ ಪದ್ಧತಿ, ಮಾತೃ ಪ್ರಧಾನ ಸಂಸ್ಕøತಿ, ತುಳುನಾಡಿನ ಜೀವನ ಪದ್ಧತಿಯ ಮಹತ್ವ, ವಿಶೇಷತೆ ಬಗ್ಗೆ ವಿವರಿಸಿ ಕುಟುಂಬಸ್ಥರನ್ನು ಹರಸಿದರು.
ಉಜಾರು ಕುಟುಂಬದ ಯಜಮಾನರಾದ ಸಂಕ್ಯಯ್ಯ ಆಳ್ವ ಯಾನೆ ಮಂಜಪ್ಪ ಶೆಟ್ಟಿ ಕನ್ನಡ ಗುರಿ, ಪುತ್ತಿಗೆ ಹೊಸಮನೆ ಮತ್ತು ಉಜಾರ್ ಮನೆ ಏಕೀಕರಣ ಸಮಿತಿ ಗೌರವಾಧ್ಯಕ್ಷ ತಿಮ್ಮಪ್ಪ ರೈ ಮುಂಬೈ, ಉಜಾರ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಶೆಟ್ಟಿ ಕೂಡ್ಲು ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.