ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲಿನ ಉತ್ಸಾಹಿ ಯುವಕರ ತಂಡವೊಂದು ಸ್ವಂತ ವೆಚ್ಚದಲ್ಲಿ ನೂತನ ಪ್ರಯಾಣಿಕರ ತಂಗುದಾಣವೊಂದನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಪೆರ್ಲ-ಪೂವನಡ್ಕ ರಸ್ತೆಯ ಬಜಕೂಡ್ಲು ಶ್ರೀ ಧೂಮಾವತೀ ದೈವಸ್ಥಾನ ಸನಿಹದಲ್ಲಿ ಸುಮಾರು 40ಸಾವಿರ ರೂ. ವೆಚ್ಚದಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಲಾಗಿದೆ.
ಮಕ್ಕಳು, ಮಹಿಳೆಯರು, ವೃದ್ಧರು ಬಸ್ಸಿಗೆ ಹಾಗೂ ಇತರ ವಾಹನಗಳಿಗಾಗಿ ಕಾದು ನಿಲ್ಲಲು ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡ ಏಳೆಂಟು ಮಂದಿಯ ಈ ತಂಡ ವಿವಿಧ ಮೂಲಗಳಿಂದ ಹಣ ಒಟ್ಟುಸೇರಿಸಿ ಸುಸಜ್ಜಿತ ಶೆಡ್ ನಿರ್ಮಿಸಿದ್ದಾರೆ. ಇದಕ್ಕಾಗಿ ಪುತ್ತೂರಿನಿಂದ ಸಿದ್ಧ ಶೆಡ್ ತರಿಸಿಕೊಂಡಿದ್ದು, ಇದನ್ನು ಟೈಲ್ಸ್ ಅಳವಡಿಸಿದ ಕಟ್ಟೆಯಲ್ಲಿ ಅಳವಡಿಸಿ, ಇದರ ಸುತ್ತು ಗ್ರಿಲ್ಸ್‍ಗಳನ್ನೂ ನೆಟ್ಟಿದ್ದಾರೆ. ಕಟ್ಟಡದೊಳಗೆ ಪತ್ರಿಕೆ ಗಳನ್ನಿರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಸೋಲಾರ್ ಲ್ಯಾಂಪ್ ವ್ಯವಸ್ಥೆಯನ್ನೂ ಇದರಲ್ಲಿ ಅಳವಡಿಸಿಕೊಳ್ಳಲು ಯೋಜನೆಯಿರಿಸಲಾಗಿದ್ದರೂ, ಆರ್ಥಿಕ ಅಡಚಣೆಯಿಂದ ಇದು ಸಾಧ್ಯವಾಗಿಲ್ಲ. ಮುಂದಿನ ಹಂತದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಶೆಲ್ಟರ್ ನಿರ್ಮಾಣ ತಂಡದ ರೂವಾರಿ ದಾಮೋದರ ಬಜಕೂಡ್ಲು ತಿಳಿಸಿದ್ದಾರೆ.
ಭಾನುವಾರ ನಡೆದ ಸಮಾರಂಬದಲ್ಲಿ ವೇದಮೂರ್ತಿ ಚಂದ್ರಶೇಖರ ನಾವವಡ ಬಜಕೂಡ್ಲು ತಂಗುದಾಣ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ನಡುಬೈಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಂಜಿನಿಯರ್ ಪ್ರಶಾಂತ್, ಸಂಕಪ್ಪ ರೈ, ಬಾಲಕೃಷ್ಣ ಕುಲಾಲ್, ಐತ್ತ ಪಾಟಾಳಿ ಮುಂತಾದವರು ಉಪಸ್ಥಿತರಿದ್ದರು. ದಾಮೋದರ ಬಜಕೂಡ್ಲು ಸ್ವಾಗತಿಸಿದರು. ಪದ್ಮನಾಭ ಸುವರ್ಣ ವಂದಿಸಿದರು.